ನಾನ್ ವೆಜ್ ತಿನ್ನುವ ಕೆಲವರಿಗೆ ಅದರಲ್ಲೂ ಫಿಶ್ ತಿನ್ನಲು ಇಷ್ಟಪಡುವವರಿಗೆ ಫಿಶ್ ಫ್ರೈ ತುಂಬಾನೇ ಇಷ್ಟ ಆಗುತ್ತೆ. ಅದರೆ ಇದೀಗ ವಿಭಿನ್ನವಾಗಿ ಬಾಳೆ ಎಲೆ ಬಳಸಿ ತವಾ ಫಿಶ್ ಫ್ರೈ ಮಾಡಿ.. ನಿಜಕ್ಕೂ ಸಕತ್ ಆಗಿರುತ್ತದೆ

ಬೇಕಾಗುವ ಸಾಮಗ್ರಿಗಳು:
* ಬಾಳೆ ಎಲೆ
* ಮೀನು ಅರ್ಧ ಕೆಜಿ
* ಕೊಬ್ಬರಿ ಎಣ್ಣೆ- 2 ಕಪ್
* ಬ್ಯಾಡಗಿ ಮೆಣಸು – 5ರಿಂದ7
* ಗುಂಟೂರು ಮೆಣಸು -6 ರಿಂದ7
* ಕೊತ್ತಂಬರಿ ಬೀಜ -2 ರಿಂದ 3 ಚಮಚ
* ಜೀರಿಗೆ- ಅರ್ಧ ಚಮಚ
* ಮೆಂತೆ- ಅರ್ಧ ಚಮಚ
* ಹುಣಸೆಹಣ್ಣು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಚಿಟಿಕೆ

ಮಾಡುವ ವಿಧಾನ:
ಮೊದಲಿಗೆ ಕೊತ್ತಂಬರಿ ಬೀಜ, ಜೀರಿಗೆ, ಗುಂಟೂರು ಮೆಣಸು, ಬ್ಯಾಡಗಿ ಮೆಣಸು, ಹುಣಸೆ ಹಣ್ಣು, ಮೆಂತೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಹುರಿದಿಟ್ಟ ಈ ಸಾಮಾಗ್ರಿಗಳು ತಣ್ಣಗಾದ ಬಳಿಕ ರುಬ್ಬಿಕೊಂಡು ಸಣ್ಣದಾಗಿ ಪೌಡರ್ ಮಾಡಿಕೊಳ್ಳಬೇಕು. ನಂತರ ಸ್ಪಲ್ಪ ಸ್ವಲ್ಪ ನೀರು ಸೇರಿಸುತ್ತಾ ಚೆನ್ನಾಗಿ ರುಬ್ಬಿ ಮಸಾಲೆಯನ್ನು ತಯಾರಿಸಿಕೊಳ್ಳಬೇಕು. ಬಳಿಕ ಮೀನು ಚೆನ್ನಾಗಿ ತೊಳೆದು ಅದನ್ನು ಮಧ್ಯಭಾಗದಲ್ಲಿ ಸೀಳಬೇಕು. ಆನಂತರ ಮಸಾಲೆಯ ಮಿಶ್ರಣವನ್ನು ಮೀನಿನ ಒಳಗೆ ತುಂಬಬೇಕು. ಮೀನು ಮ್ಯಾರಿನೇಟ್ ಆಗಲು ಸ್ವಲ್ಪ ಹೊತ್ತು ಬಿಡಬೇಕು.

ಸ್ವಲ್ಪ ಹೊತ್ತಿನ ಬಳಿಕ ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಈಗ ಮೀನಿಗೆ ಚೆನ್ನಾಗಿ ಮಸಾಲೆಯನ್ನು ಹಚ್ಚಿ ಬಾಳೆ ಎಲೆಯ ಜೊತೆಯಲ್ಲಿ ಸುತ್ತಿಕೊಳ್ಳಬೇಕು. ಒಂದು ತವೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಬಾಳೆ ಎಲೆಯಲ್ಲಿ ಸುತ್ತಿಟ್ಟ ಮಸಾಲೆ ಮೀನುಗಳನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.

