– ಹಣ್ಣಿನ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಗಲಾಟೆ
– ಇಬ್ಬರು ಹಣ್ಣಿನ ವ್ಯಾಪಾರಿಗಳು ಅರೆಸ್ಟ್
ಮುಂಬೈ: ಹಣ್ಣು ಮಾರುವ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಬೇರೆ ವಾಹನಗಳ ಪಾರ್ಕಿಂಗ್‍ಗೆ ತೊಂದರೆ ಆಗುತ್ತಿದೆ ಎಂದು ಆರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಕಂಡಿದೆ.
ನಗರದ ಸಬ್ ಅರ್ಬನ್ ಪೊವಾಯಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರ ಹಣ್ಣಿನ ವ್ಯಾಪಾರಿಗಳಿಬ್ಬರು ಜೊತೆಗೂಡಿ ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಪೊವಾಯಿ ನಿವಾಸಿ ಸಚಿನ್ ದಿನೇಶ್ ಸಿಂಗ್(20) ಹಾಗೂ ಜಿತೇಂದ್ರ ಹರಿರಾಮ್ ರೈಕರ್(32) ಎಂದು ಗುರುತಿಸಲಾಗಿದೆ. ಕೊಲೆಯಾದ ಝೊಮ್ಯಾಟೋ ಡೆಲಿವರಿ ಬಾಯ್ ಅನ್ನು ಅನ್ಮೋಲ್ ಭಾಸ್ಕರ್ ಸುರತ್ಕಲ್(30) ಎಂದು ಗುರುತಿಸಲಾಗಿದೆ.
Advertisement
Advertisement
ಸಚಿನ್ ಮತ್ತು ಜಿತೇಂದ್ರ ಇಬ್ಬರು ಪೊವಾಯಿಯಲ್ಲಿ ತಳ್ಳುವ ಗಾಡಿಯ ಹಣ್ಣಿನ ವ್ಯಾಪ್ಯಾರಿಗಳಾಗಿದ್ದು, ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಹಣ್ಣಿನ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದರು. ಇದರಿಂದ ಇತರೆ ವಾಹನಗಳನ್ನು ನಿಲ್ಲಿಸಲು ಸಮಸ್ಯೆ ಆಗುತ್ತಿತ್ತು. ಆದ್ದರಿಂದ ಮಂಗಳವಾರ ಅನ್ಮೋಲ್ ನಿಮ್ಮ ಗಾಡಿಯನ್ನು ಸರಿಯಾಗಿ ನಿಲ್ಲಿಸಿ, ನಿಮ್ಮಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದನು. ಈ ವೇಳೆ ಸಚಿನ್ ಹಾಗೂ ಅನ್ಮೋಲ್ ನಡುವೆ ಜಗಳವಾಗಿತ್ತು.
Advertisement
Advertisement
ಅದೇ ಸಿಟ್ಟಲ್ಲಿದ್ದ ಸಚಿನ್ ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಅನ್ಮೋಲ್ ವಿರುದ್ಧ ಕಿಡಿಕಾರಿದ್ದನು. ಆಗ ಜಿತೇಂದ್ರ ಹಾಗೂ ಇತರೆ ಸ್ನೇಹಿತರು ಈ ವಿಚಾರವನ್ನು ಅಂತ್ಯಗೊಳಿಸು ಎಂದು ಹೇಳಿದ್ದರು. ಅದನ್ನೇ ತಲೆಯಲ್ಲಿ ಇಟ್ಟುಕೊಂಡಿದ್ದ ಸಚೀನ್ ಅನ್ಮೋಲ್‍ನನ್ನು ಕೊಲೆ ಮಾಡಲು ನಿರ್ಧರಿಸಿದ. ಬೇಕಂತಲೇ ಅನ್ಮೋಲ್ ಜೊತೆ ಜಗಳವಾಡುತ್ತಾ ಏಕಾಏಕಿ ಆತನಿಗೆ ಚಾಕು ಇರಿದು ಸಚೀನ್ ಪರಾರಿಯಾದ. ಆರೋಪಿಯೊಂದಿಗೆ ಇದ್ದ ಜಿತೇಂದ್ರ ಕೂಡ ಓಡಿಹೋದ.
ರಸ್ತೆ ಮೇಲೆ ಬಿದ್ದಿದ್ದ ಅನ್ಮೋಲ್‍ನನ್ನು ಗಮನಿಸಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲಿ ಅನ್ಮೋಲ್ ಸಾವನ್ನಪ್ಪಿದ್ದನು. ಆರೋಪಿಗಳು ಅನ್ಮೋಲ್‍ನ ಹೊಟ್ಟೆ ಹಾಗೂ ಎದೆಗೆ ಚಾಕು ಇರಿದಿದ್ದ ಪರಿಣಾಮ ಅಧಿಕ ರಕ್ತಸ್ರಾವವಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು ಎಂದು ವೈದ್ಯರು ತಿಳಿಸಿದರು.
ಈ ಘಟನೆ ನಡೆದ ಬಳಿಕ ಆರೋಪಿಗಳು ಉತ್ತರ ಪ್ರದೇಶಕ್ಕೆ ಹೋಗಿ ತಲೆಮರಿಸಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ತೆರೆಳಿದ್ದರು. ಈ ಬಗ್ಗೆ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿದ್ದಾರೆ.