ಬೆಂಗಳೂರು: ಸಾಧನೆಯ ಜೊತೆ ಅದೃಷ್ಟ ಇದ್ದರೆ ವ್ಯಕ್ತಿಯ ಹುದ್ದೆ ಹೇಗೆ ಬೇಕಾದರೂ ಬದಲಾಗಬಹುದು ಎನ್ನುವುದಕ್ಕೆ ರಜತ್ ಪಾಟಿದಾರ್ ಈಗ ಸಾಕ್ಷಿಯಾಗಿದ್ದಾರೆ. ಟೂರ್ನಿಯ ಅರ್ಧದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರಿದ್ದ ರಜತ್ ಪಾಟಿದಾರ್ (Rajat Patidar) ಈಗ ಆ ತಂಡವನ್ನೇ ಮುನ್ನಡೆಸುವ ಮೂಲಕ ಐಪಿಎಲ್‌ನಲ್ಲಿ (IPL) ಸಾಧನೆ ಮಾಡಿದ್ದಾರೆ.
2021 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದ್ದ ರಜತ್ ಕೇವಲ 4 ಪಂದ್ಯದಲ್ಲಿ 71 ರನ್ ಹೊಡೆದಿದ್ದರು. ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಅವರನ್ನು ಕೈಬಿಟ್ಟಿತ್ತು. 2022ರ ಹರಾಜಿನಲ್ಲಿ ಯಾವುದೇ ತಂಡ ರಜತ್ ಅವರನ್ನು ಖರೀದಿಸದ ಕಾರಣ ಅಲ್‌ಸೋಲ್ಡ್ ಆಗಿದ್ದರು.
Advertisement
Advertisement
2022ರ ಆವೃತ್ತಿಯಲ್ಲಿ ಕರ್ನಾಟಕದ ಲುವ್ನಿತ್ ಸಿಸೋಡಿಯಾ (Luvnith Sisodia) ಗಂಭೀರವಾಗಿ ಗಾಯಗೊಳ್ಳುತ್ತಾರೆ. ಇವರ ಜಾಗಕ್ಕೆ ಯಾರನ್ನು ಖರೀದಿಸಬೇಕು ಎಂದು ಯೋಚನೆಯಲ್ಲಿದ್ದಾಗ ಆರ್‌ಸಿಬಿಗೆ ಹೊಳೆದದ್ದೇ ರಜತ್ ಪಾಟಿದಾರ್ ಹೆಸರು. ಹೀಗಾಗಿ ಟೂರ್ನಿಯ ಅರ್ಧದಲ್ಲಿ ರಜತ್ ಮತ್ತೆ ಆರ್‌ಸಿಬಿ ತಂಡವನ್ನು ಸೇರುತ್ತಾರೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ರಿಷಭ್ ಪಂತ್ ಉಳಿಸಿದ್ದ ವ್ಯಕ್ತಿ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ – ಪ್ರಿಯತಮೆ ಸಾವು
Advertisement
20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಆರ್‌ಸಿಬಿಗೆ ಮರಳಿ ಬಂದ ನಂತರ ರಜತ್ ಸ್ಫೋಟಕ ಆಟವನ್ನು ಪ್ರದರ್ಶಿಸುತ್ತಾರೆ. ಅದರಲ್ಲೂ ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಲಕ್ನೋ ವಿರುದ್ಧ ಕೇವಲ 54 ಎಸೆತಗಳಲ್ಲಿ 112 ರನ್ ( 12 ಬೌಂಡರಿ,7 ಸಿಕ್ಸ್) ಹೊಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯವನ್ನು ಆರ್‌ಸಿಬಿ ರೋಚಕ 14 ರನ್‌ಗಳಿಂದ ಗೆದ್ದುಕೊಳ್ಳುತ್ತದೆ. ಈ ಮೂಲಕ ಭಾರತ ತಂಡ ಸೇರದೇ ಶತಕ ಹೊಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಜತ್ ಪಾತ್ರವಾಗುತ್ತಾರೆ.
Advertisement
2024 ರಲ್ಲಿ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಉಳಿಸಿಕೊಂಡಿತ್ತು. ನಾಯಕನಾಗಿದ್ದ ಡುಪ್ಲೆಸಿಸ್ ಅವರನ್ನು ಕೈ ಬಿಟ್ಟು ರಜತ್ ಪಾಟಿದರ್ ಅವರನ್ನು 11 ಕೋಟಿ ರೂ. ನೀಡಿ ಉಳಿಸಿಕೊಂಡಾಗ ಈ ಬಾರಿ ಆರ್‌ಸಿಬಿ ನಾಯಕನಾಗುತ್ತಾರಾ ಎಂಬ ಪ್ರಶ್ನೆ ಆಗಲೇ ಎದ್ದಿತ್ತು. ಆದರೆ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಂಡಿರುವಾಗ ಯಾರು ನಾಯಕನಾಗಬಹುದು ಎಂಬ ಕುತೂಹಲ ಮೂಡಿತ್ತು. ಆದರೆ ಈಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಆರ್‌ಸಿಬಿ ತಂಡ ರಜತ್ ಅವರಿಗೆ ನಾಯಕತ್ವದ ಪಟ್ಟ ನೀಡಿದೆ.
ಮೂರು ಅವೃತ್ತಿಯಲ್ಲಿ ರಜತ್ 27 ಐಪಿಎಲ್ ಪಂದ್ಯಗಳಿಂದ 799 ರನ್ ಹೊಡೆದಿದ್ದಾರೆ. 1 ಶತಕ, 7 ಅರ್ಧಶತಕ ಸಿಡಿಸಿದ್ದಾರೆ. 34.74 ಬ್ಯಾಟಿಂಗ್ ಸರಾಸರಿ, 158.85 ಸ್ಟ್ರೈಕ್ ರೇಟ್ ಹೊಂದಿರುವ ರಜತ್ ಐಪಿಎಲ್‌ನಲ್ಲಿ ಬೌಂಡರಿಗಿಂತಲೂ ಸಿಕ್ಸ್ ಹೆಚ್ಚು ಸಿಡಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 51 ಬೌಂಡರಿ, 54 ಸಿಕ್ಸ್ ಸಿಡಿಸಿ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿದ್ದಾರೆ.
ಯಾವ ವರ್ಷ ಎಷ್ಟು ರನ್?
2021 – 4 ಪಂದ್ಯ, 71 ರನ್
2022 – 8 ಪಂದ್ಯ, 333 ರನ್
2024 – 15 ಪಂದ್ಯ, 395 ರನ್