– ಕಾಂಗ್ರೆಸ್, ಬಿಜೆಪಿಯಲ್ಲಿ ಬಂಡಾಯದ್ದೇ ತಲೆನೋವು
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಕೆಡವಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಆರ್‍ಆರ್ ನಗರ, ಮಸ್ಕಿ ಹೊರತುಪಡಿಸಿ 15 ಕ್ಷೇತ್ರಗಳ ಉಪಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದೆ. ಅಥಣಿ, ಕಾಗವಾಡ, ಗೋಕಾಕ್, ಎಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯ್ ನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಇಂದಿನಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ.
ನವೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನ.18 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ನ.19ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನ.21 ರಂದು ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದೆ. ಡಿಸೆಂಬರ್ 5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ಹಾಗೂ ಫಲಿತಾಂಶ ಹೊರಬೀಳಲಿದೆ.
Advertisement
Advertisement
ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ..!
ಉಪಸಮರದಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಗದ್ದುಗೆ ಗಟ್ಟಿ ಮಾಡಿಕೊಳ್ಳಲು ಕಸರತ್ತು ನಡೆಸ್ತಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಯೋಧ್ಯೆ ಎಂಬ ಹೊಸ ಅಸ್ತ್ರ ಸಿಕ್ಕಿದೆ. ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರುನಿಶಾನೆ ತೋರಿಸಿದ್ದನ್ನು ಪ್ರಸ್ತಾಪಿಸಿ, ರಾಮನಾಮ ಜಪಿಸುತ್ತಾ ಬಿಜೆಪಿ ನಾಯಕರು ಜನರ ಮುಂದೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ರಾಮ ಜಪ ಮಾಡಿದರೆ ಹೆಚ್ಚಿನ ಮತ ಫಸಲು ಬರುತ್ತದೆ ಎಂದು ನಂಬಿರುವ ರಾಜ್ಯ ಬಿಜೆಪಿ ನಾಯಕರು, ಅನುಮತಿಗಾಗಿ ಹೈಕಮಾಂಡ್‍ನತ್ತ ಚಿತ್ತ ಹರಿಸಿದ್ದಾರೆ.
Advertisement
ಹೀಗೆ ರಾಮನಾಮ ಪಠಣದ ಉಮೇದಿನಲ್ಲಿದ್ದ ಬಿಜೆಪಿಗೆ ಇದೀಗ ಬಂಡಾಯದ ಬಿಸಿ ತಾಗಲು ಶುರುವಾಗುತ್ತಿದೆ. ಹೊಸಕೋಟೆಯಲ್ಲಿ ತಮ್ಮ ರಾಜಕೀಯ ಎದುರಾಳಿ ಎಂಟಿಬಿಗೆ ಬಿಜೆಪಿ ಮಣೆ ಹಾಕಲು ಸಿದ್ಧತೆ ನಡೆಸ್ತಿರೋದನ್ನು ಅರಗಿಸಿಕೊಳ್ಳದ ಶರತ್ ಬಚ್ಚೇಗೌಡ ರೆಬೆಲ್ ಆಗಿದ್ದಾರೆ. ಪಕ್ಷೇತರರಾಗಿ ಇದೇ 15ರಂದು ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
Advertisement
ಈ ನಡುವೆ, ಸಿಎಂ ಯಡಿಯೂರಪ್ಪ, ಕೆಆರ್ ಪೇಟೆ ಕ್ಷೇತ್ರದಲ್ಲಿ ನಡೆದ ಯಾದವ ಸಮಾವೇಶದಲ್ಲಿ ಪಾಲ್ಗೊಂಡು ಯಾದವ ಸಮುದಾಯದ ಮತಗಳಿಗೆ ಗಾಳ ಹಾಕಲು ನೋಡಿದ್ದಾರೆ. ಇತ್ತ ಬೆಳಗಾವಿ ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ಬೇಗೆ ತಣ್ಣಗಾಗುವ ಲಕ್ಷಣ ಕಂಡು ಬರುತ್ತಿಲ್ಲ. ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್‍ಗೆ ಬಿಜೆಪಿ ಮಣೆ ಹಾಕಲು ಮುಂದಾಗಿರೋದನ್ನು ವಿರೋಧಿಸಿ ಮಾಜಿ ಶಾಸಕ ರಾಜು ಕಾಗೆ ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್‍ನತ್ತ ಚಿತ್ತ ಹರಿಸಿದ್ದಾರೆ. ಇದರ ಭಾಗವಾಗಿ ರಾಜು ಕಾಗೆ, ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಸಿದ್ದುಗೆ ಸಾಥ್ ಕೊಡ್ತಾರಾ ಡಿಕೆ..?
ಹೈಕಮಾಂಡ್ ಮಟ್ಟದಲ್ಲಿ ಭಾರೀ ಲಾಬಿ ನಡೆಸಿ, ಕಷ್ಟಪಟ್ಟು ವಿಪಕ್ಷ ನಾಯಕನ ಸ್ಥಾನ ಗಿಟ್ಟಿಸಿಕೊಂಡ ಸಿದ್ದರಾಮಯ್ಯಗೆ ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಬೇಕಾದ ಒತ್ತಡದಲ್ಲಿದ್ದಾರೆ. ಇದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡ್ತಿದ್ದಾರೆ. ಏಕಾಂಗಿಯಾಗಿ ಕಣಕ್ಕೆ ಧುಮುಕಿದ್ರೆ ಕಷ್ಟ ಎಂಬುದನ್ನು ಅರಿತಿರೋ ಸಿದ್ದರಾಮಯ್ಯ, ಈಗ ಸಾಮೂಹಿಕ ನಾಯಕತ್ವದ ಮಂತ್ರ ಪಠಣ ಮಾಡ್ತಿದ್ದಾರೆ. ಎಲೆಕ್ಷನ್‍ನಲ್ಲಿ ಜಂಟಿ ಪ್ರಚಾರ ನಡೆಸೋಣ ಎಂದು ಡಿಕೆಶಿಗೆ ಆಫರ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ಇನ್ನೂ ಡಿಕೆಶಿ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ಜೊತೆಗೆ ಮೂಲ ಕಾಂಗ್ರೆಸ್ಸಿಗರು ಕೂಡ ಸಿದ್ದರಾಮಯ್ಯಗೆ ಕೈಕೊಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈಗಾಗಲೇ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿರುವ ಕೈ ಪಾಳಯ ಇಂದು ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಸಂಭವ ಇದೆ.
ಆದರೆ ಗೋಕಾಕ್ ಪಾಲಿಟಿಕ್ಸ್ ನಲ್ಲಿ ಡಿಕೆಶಿ ಮತ್ತೆ ಮೂಗು ತೂರಿಸ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಂದೆಡೆ, ರಮೇಶ್ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿ ಕಣಕ್ಕಿಳಿಸಲು ಸಿದ್ದು ಆಪ್ತ ಸತೀಶ್ ಸಿದ್ಧತೆ ನಡೆಸಿದ್ದಾರೆ. ಈ ಹೊತ್ತಲ್ಲೇ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಜೆಪಿಯ ಅಶೋಕ್ ಪೂಜಾರಿ, ಡಿಕೆಶಿಯನ್ನು ಇವತ್ತು ಮೀಟ್ ಮಾಡಿ ಚರ್ಚೆ ನಡೆಸಿದ್ದಾರೆ. ಅಶೋಕ್ ಪೂಜಾರಿ ಪರ ಡಿಕೆ ಲಾಬಿ ನಡೆಸುವ ಸಂಭವವೂ ಇದೆ. ಆದರೆ ಲಖನ್ ಬಿಟ್ಟು ಬೇರೆಯವರಿಗೆ, ಟಿಕೆಟ್ ಕೊಟ್ರೆ ಕಷ್ಟ ಎಂದಿದ್ದಾರೆ.
ಇತ್ತ, ಸುಪ್ರೀಂಕೋರ್ಟ್ ಬುಧವಾರ ನೀಡಲಿರುವ ತೀರ್ಪಿನತ್ತ ಚಿತ್ತ ಹರಿಸಿರೋ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್‍ಗೆ ಮೋಸ ಮಾಡಿ ಹೋಗುವಾಗ, ಹಾಕಿದ್ದು ಚೂರಿನೋ ಚಾಕುನೋ.. ನೀವು ಮಾಡಿದು ಮೋಸ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಂದ್ಕಡೆ ಆನಂದ್ ಸಿಂಗ್ ಕೂಡ ಸದ್ದಿಲ್ಲದೇ ಪ್ರಚಾರಕ್ಕೆ ಮುಂದಾಗಿದ್ದಾರೆ. ವಿಜಯನಗರ ಶೀಘ್ರ ಜಿಲ್ಲೆ ಆಗಲಿದೆ ಎಂದು ವೀಡಿಯೋ ಹರಿದುಬಿಟ್ಟಿದ್ದಾರೆ. ಅನರ್ಹರು ಏನೇ ತಯಾರಿ ನಡೆಸಿದ್ರೂ, ಬಿಜೆಪಿ ಏನೆಲ್ಲಾ ಕಸರತ್ತು ನಡೆಸಿದ್ರೂ ಅವ್ರಿಗೆ ಸುಪ್ರೀಂ ತೀರ್ಪಿನ ಆತಂಕವಂತೂ ಇದ್ದೇ ಇದೆ. ಬುಧವಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.