ಹಿಂದುತ್ವದ ಸಾಮ್ರಾಟ, ದೇಶದ ಆರ್ಥಿಕ ಪ್ರಗತಿಯನ್ನೇ ಸದಾ ಉಸಿರಾಡುವ ನಾಯಕನಿಗೆ ಭಾರತೀಯರು ಮತ್ತೆ ಕಿರೀಟ ತೊಡಿಸಿದ್ದಾರೆ. ಕೇಸರಿ ಪಡೆ ನಾಯಕ ನರೇಂದ್ರ ಮೋದಿ ದೆಹಲಿ ಗದ್ದುಗೆ ಅಲಂಕರಿಸಿದ್ದಾರೆ. ಭಾರತವನ್ನು ವಿಶ್ವದ ನಂ.1 ಆರ್ಥಿಕ ರಾಷ್ಟ್ರ ಮಾಡುವುದೇ ಧ್ಯೇಯ. ಆತ್ಮನಿರ್ಭರ ಭಾರತ, ಸ್ವಾವಲಂಭಿ ರಾಷ್ಟ್ರವನ್ನಾಗಿಸುವುದೇ ಪ್ರಮುಖ ಗುರಿ. ಜಗತ್ತಿನ ದೊಡ್ಡಣ್ಣ, ಹಿರಿಯಣ್ಣ ಎಂದೇ ಖ್ಯಾತಿ ಹೊಂದಿದ್ದ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿ ಎದುರಿಸಿದ ಸಂದರ್ಭದಲ್ಲೂ ಭಾರತ ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಸಾಗಿತ್ತು. ಭಾರತದ ಪ್ರಗತಿಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವವನ್ನು ಜಾಗತಿಕ ನಾಯಕರೆಲ್ಲಾ ಕೊಂಡಾಡುತ್ತಿದ್ದಾರೆ. ಮೋದಿಯಂಥ ನಾಯಕತ್ವ ಬೇಕು ಎಂಬ ಮಾತುಗಳನ್ನಾಡಿದ್ದಾರೆ. ಈ ಮಟ್ಟಿನ ಜನಪ್ರಿಯತೆ, ಒಂದು ದೇಶವನ್ನು ಮುನ್ನಡೆಸಲು ಅಧಿಕಾರ ಮೋದಿಗೆ ಅವರಿಗೆ ಸುಲಭಕ್ಕೆ ದಕ್ಕಿದ್ದಲ್ಲ. ಕಲ್ಲು-ಮುಳ್ಳಿನ ಹಾದಿ ಸವೆಸಿ, ಕಷ್ಟ ಕೋಟಲೆಗಳನ್ನು ದಾಟಿ ‘ನಮೋ’ ಇಂದು ವಿಶ್ವನಾಯಕನಾಗಿ ಹೊರಹೊಮ್ಮಿದ್ದಾರೆ.
Advertisement
ಇಂದು ಮೋದಿ (Narendra Modi) ವಿಶ್ವನಾಯಕ. ಆದರೆ ಬಾಲ್ಯದಲ್ಲಿ ಕಡುಬಡತನದ ಬದುಕು ಕಂಡವರು. ಭವಿಷ್ಯಕ್ಕೆ ಓದು, ಮನೆಯ ನಿರ್ವಹಣೆಗೆ ಟೀ ಅಂಗಡಿಯಲ್ಲಿ ಕೆಲಸ. ಎಳೆಯ ವಯಸ್ಸಿನಲ್ಲೇ ಬಾಲಕನಲ್ಲಿದ್ದ ಜವಾಬ್ದಾರಿ ಕಂಡು ಅಚ್ಚರಿಪಟ್ಟು ಹಾಡಿ ಹೊಗಳಿದ ಜನರೆಷ್ಟೋ! ಬದುಕಲ್ಲಿ ಬಡತನವಿದ್ದರೂ ಬಾಲಕನಲ್ಲಿ ಅಧ್ಯಾತ್ಮದ ಕಡೆಗೆ ಅಪಾರ ಆಸಕ್ತಿ. ಯುವಶಕ್ತಿ ವಿವೇಕಾನಂದರೇ ಬಾಲಕನಿಗೆ ಆದರ್ಶ. ಸದೃಢ ಭಾರತದ ಕನಸು ಕಂಡಿದ್ದ ನರೇಂದ್ರ ದಾಮೋದರ ದಾಸ್ ಮೋದಿ ಬಾಲ್ಯದಲ್ಲೇ ಹೊಟ್ಟೆ ಪಾಡಿಗಾಗಿ ಚಹಾ ಮಾರಿದರು. ತಟ್ಟೆ, ಲೋಟ ತೊಳೆದರು. ಶಾಲಾ ದಿನಗಳಲ್ಲಿ ಅಧ್ಯಾತ್ಮದ ಕಡೆ ಒಲವು ಹೆಚ್ಚಾಗಿ ಸನ್ಯಾಸತ್ವ ಸ್ವೀಕರಿಸುವುದಕ್ಕೂ ಹೊರಟಿದ್ದರು. ಆದರೆ ಮೋದಿ ಹಾದಿ ಬದಲಿಸಿದವರು ರಾಮಕೃಷ್ಣ ಮಠದ ಆತ್ಮಸ್ಥಾನಂದ ಮಹಾರಾಜರು. ಬಾಲಕ ಮೋದಿ ಕೋರಿಕೆಯನ್ನು ಅಂದು ತಿರಸ್ಕರಿಸಿದರು. ಸನ್ಯಾಸತ್ವ ತಡೆದು ದೇಶ ಸೇವೆ ಮಾಡು ಎಂದು ಸಲಹೆಯಿತ್ತರು. ಅಂದು ಮೋದಿ ಸನ್ಯಾಸತ್ವ ಸ್ವೀಕರಿಸಿದ್ದರೆ ಇಂದು ದೇಶದ ಜನತೆಗೆ ವಿಶ್ವನಾಯಕನ ಸೇವೆ ಸಿಗುತ್ತಿರಲಿಲ್ಲ. ಟೀ ಮಾರುತ್ತಿದ್ದ ಬಾಲಕ ಮುಂದೆ ಭಾರತದ ಪ್ರಧಾನಿಯಾದ. ಹೀಗೆ ಮೋದಿ ಸಾಗಿ ಬಂದ ಹಾದಿ ನಿಜಕ್ಕೂ ಕುತೂಹಲ ಮತ್ತು ಯುವಸಮುದಾಯಕ್ಕೆ ಸ್ಪೂರ್ತಿದಾಯಕ. ಇದನ್ನೂ ಓದಿ: ಭಾರತದಲ್ಲಿ ‘ಕಮಲ’ ಅರಳಿ ನಿಂತ ಕಥೆ
Advertisement
Advertisement
ವಡ್‌ನಗರ ಕುಗ್ರಾಮದಲ್ಲಿ ಜನನ
ನರೇಂದ್ರ ದಾಮೋದರದಾಸ್ ಮೋದಿ 1950ರ ಸೆಪ್ಟೆಂಬರ್ 17 ರಂದು ಆಗಿನ ಬಾಂಬೆ ರಾಜ್ಯದ (ಈಗಿನ ಗುಜರಾತ್) ಮೆಹ್ಸಾನಾ ಜಿಲ್ಲೆಯ ವಡ್‌ನಗರ ಎಂಬ ಕುಗ್ರಾಮದಲ್ಲಿ ಜನಿಸಿದರು. ದಾಮೋದರದಾಸ್ ಮುಲಚಂದ್ ಮೋದಿ ಮತ್ತು ಹೀರಾಬೆನ್ ಮೋದಿ ದಂಪತಿಯ ನಾಲ್ಕು ಮಕ್ಕಳಲ್ಲಿ ಮೋದಿ ಮೂರನೇಯವರು. ಮೋಧ್ ಗಂಭಿ ತೆಲಿ ಜಾತಿಯ ಬಡ ಕುಟುಂಬದಲ್ಲಿ ಜನಿಸಿದ ಮೋದಿ ಬಾಲ್ಯದ ಕಷ್ಟದ ಜೀವನ ಕಂಡವರು. ವಡ್‌ನಗರದ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಂದೆಗೆ ಸಹಾಯ ಮಾಡುತ್ತಿದ್ದರು. ಇದರ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನೂ ಪೂರೈಸಿದರು. ಎಬಿವಿಪಿ ಕಾರ್ಯಕರ್ತರಾಗಿದ್ದಾಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಸಹಾಯ ಮಾಡಿದ್ದರು. ಈ ಗುಣ ಅವರನ್ನು ದೇಶ ಸೇವೆಗೆ ಪ್ರೇರೇಪಿಸಿತು.
Advertisement
ಆರ್‌ಎಸ್‌ಎಸ್ ಸಾಂಗತ್ಯದಲ್ಲಿ ಬೆಳೆದ ಮೋದಿ
ಮೋದಿ ಬಾಲ್ಯದಿಂದಲೂ ಶಿಸ್ತು, ಕಠಿಣ ಪರಿಶ್ರಮದ ಗುಣಗಳನ್ನು ರೂಡಿಸಿಕೊಂಡಿದ್ದರು. ಈ ನಡುವೆ ಆರ್‌ಎಸ್‌ಎಸ್ ಸಾಂಗತ್ಯ ಸಿಕ್ಕಿದ್ದು ಅವರ ಎಂಟನೇ ವಯಸ್ಸಿಗೆ. ಟೀ ಮಾರಿಕೊಂಡಿದ್ದ ಬಾಲಕ ಆಗಾಗ್ಗೆ ಆರ್‌ಎಸ್‌ಎಸ್‌ನ ಸ್ಥಳೀಯ ಯುವ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಆರ್‌ಎಸ್‌ಎಸ್‌ನ ಲಕ್ಷ್ಮಣರಾವ್ ಇನಾಮದಾರ್ ಅವರು ಬಾಲಕ ಮೋದಿ ಮೇಲೆ ಪ್ರಭಾವ ಬೀರಿದರು. ಇದನ್ನೂ ಓದಿ: ಮೋದಿ ಸಂಪುಟಕ್ಕೆ ಮೂರನೇ ಬಾರಿಗೆ ಆಯ್ಕೆಯಾದ ಏಕೈಕ ಮಹಿಳೆ ನಿರ್ಮಲಾ ಸೀತಾರಾಮನ್
20ನೇ ವಯಸ್ಸಿನಲ್ಲಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದರು. ಅಲ್ಲಿ ಆರ್‌ಎಸ್‌ಎಸ್‌ನ ಸದಸ್ಯರಾದರು. ಮೋದಿಯ ಸಮರ್ಪಣಾಭಾವ, ಸಂಘಟನಾ ಕೌಶಲ್ಯ ಲಕ್ಷ್ಮಣರಾವ್ ಅವರನ್ನು ಮೆಚ್ಚಿಸಿತು. 1972 ರಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾದರು. ಮೋದಿ ತನ್ನ ಬದುಕಿನ ಬಹುಪಾಲು ಸಮಯವನ್ನು ಆರ್‌ಎಸ್‌ಎಸ್‌ಗೆ ಮೀಸಲಿಟ್ಟರು. ಸಂಘಟನೆಯಲ್ಲಿ ಹಂತಹಂತವಾಗಿ ಬೆಳದರು. ಕೆಲ ವರ್ಷಗಳಲ್ಲೇ ಸಂಭಾಗ್ ಪ್ರಚಾರಕ್ ಆದರು. ಅವರಿಗೆ ದಕ್ಷಿಣ ಮತ್ತು ಮಧ್ಯ ಗುಜರಾತ್‌ನ ಉಸ್ತುವಾರಿ ನೀಡಲಾಯಿತು. ತಮಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಸಂಘದ ಹಿರಿಯ ನಾಯಕರ ಮನಗೆದ್ದರು.
ಆರ್‌ಎಸ್‌ಎಸ್‌ನಲ್ಲಿದ್ದಾಗ ಮೋದಿ ಅಧ್ಯಯನಶೀಲರಾಗಿದ್ದರು. ಭಾರತದ ಇತಿಹಾಸ, ಆಧುನಿಕ ಭಾರತ ಸೇರಿದಂತೆ ಮುಂತಾದ ವಿಚಾರಗಳ ಅಧ್ಯಯನ ಮಾಡಿದರು. ಜೊತೆಗೆ ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪೂರ್ಣಗೊಳಿಸಿದರು. 1975 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿದ್ದರು. ಇದನ್ನೂ ಓದಿ: ನೆಹರೂ ದಾಖಲೆ ಸರಿಗಟ್ಟಿದ ಮೋದಿ – ಪ್ರಮಾಣವಚನದಲ್ಲಿ ʼನಮೋʼ ಧರಿಸಿದ್ದ ಉಡುಗೆ ವಿಶೇಷತೆ ಏನು?
ಕಮಲ ಹಿಡಿದ ‘ದಾಮೋದರ’ದಾಸ್
ಸಂಘಟನಾ ಚತುರನಾಗಿ ಗೆದ್ದ ಮೋದಿ 1980 ರಲ್ಲಿ ಬಿಜೆಪಿ ಸೇರುವುದರೊಂದಿಗೆ ರಾಜಕೀಯ ರಂಗಪ್ರವೇಶ ಮಾಡಿದರು. ಸಾಂಸ್ಥಿಕ ಕೌಶಲ್ಯ ಮತ್ತು ಸಮರ್ಪಣಾ ಮನೋಭಾವ ಪಕ್ಷದಲ್ಲೂ ಬಹುಬೇಗ ಬೆಳೆಯಲು ಸಹಕಾರಿಯಾಯಿತು. ಸಂಘದ ಸಾಂಗತ್ಯದಲ್ಲಿ ಬೆಳೆದ ಮೋದಿ ಅದ್ಭುತ ವಾಗ್ಮಿಯಾಗಿ ರೂಪುಗೊಂಡಿದ್ದರು. ಅವರ ಮಾತುಗಳನ್ನು ಕೇಳಲು ಜನ ಅಪಾರ ಸಂಖ್ಯೆಯಲ್ಲಿ ನೆರೆಯುತ್ತಿದ್ದರು. ಗುಜರಾತ್‌ನಲ್ಲಿ ಬಿಜೆಪಿ ಅಸ್ತಿತ್ವವನ್ನು ಬಲಪಡಿಸುವಲ್ಲಿ ಮೋದಿ ನಿರ್ಣಾಯಕ ಪಾತ್ರ ವಹಿಸಿದರು.
ಗುಜರಾತ್ ಸಿಎಂ ಪಟ್ಟಕ್ಕೇರಿದ ಮೋದಿ
ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮೋದಿ ಚುನಾವಣೆಗಳಲ್ಲಿ ಪಕ್ಷ ಸಂಘಟಿಸಲು ನೆರವಾದರು. 1986 ರಲ್ಲಿ ಎಲ್.ಕೆ.ಅಡ್ವಾಣಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ಆಗ ಮೋದಿ ಅವರ ಹೆಸರು ಮುನ್ನೆಲೆಗೆ ಬಂದಿತ್ತು. 1987 ರಲ್ಲಿ ಮೋದಿ ಗುಜರಾತ್ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾದರು.
2001ರಲ್ಲಿ ಗುಜರಾತ್‌ನ ಆಗಿನ ಸಿಎಂ ಕೇಶುಭಾಯಿ ಪಟೇಲ್ ಆಡಳಿತದ ವಿರುದ್ಧ ಭಿನ್ನದನಿ ಶುರುವಾಗಿತ್ತು. ಅದೇ ಸಂದರ್ಭದಲ್ಲಿ ಪಟೇಲ್‌ರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ಬಿಜೆಪಿ ನಾಯಕತ್ವದ ಕಣ್ಣಿಗೆ ಬಿದ್ದಿದ್ದು ನರೇಂದ್ರ ಮೋದಿ. ಅದೇ ವರ್ಷದ ಅಕ್ಟೋಬರ್ 3 ರಂದು ಮೋದಿ ಗುಜರಾತ್ ಸಿಎಂ ಆದರು. ನಂತರ 2002 ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿ ಗುಜರಾತ್ ವಿಧಾನಸಭೆ ಪ್ರವೇಶಿಸಿದರು. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಪ್ರಮಾಣವಚನ ಸ್ವೀಕಾರ
ಕಳಚಿತು ಗೋಧ್ರಾ ದುರಂತದ ಕಳಂಕ
2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಗೋಧ್ರಾ ದುರಂತ, ಕೋಮುಗಲಭೆ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ವಿವಾದಕ್ಕೆ ಸಿಲುಕಿಸಿತು. ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ರೈಲಿನ ಬೋಗಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ 58 ಮಂದಿ ಸುಟ್ಟು ಕರಕಲಾಗಿದ್ದರು. ಪರಿಣಾಮ ಗುಜರಾತ್ ಹೊತ್ತಿ ಉರಿಯಿತು. ಮುಸಲ್ಮಾನರ ಮೇಲೆ ನಡೆದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಈ ಗಲಭೆ ಹಿಂದೆ ಮೋದಿ ಅವರ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದವು. 2010ರ ವರೆಗೆ ನಿರಂತರವಾಗಿ ತನಿಖೆಗಳು ನಡೆದವು. ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಿದ ಮೋದಿ ಆಪಾದನೆಯಿಂದ ಮುಕ್ತರಾದರು. ಅವರನ್ನು ಪ್ರಕರಣದಿಂದ ಖುಲಾಸೆ ಮಾಡಲಾಯಿತು.
ದೇಶಕ್ಕೆ ಮಾದರಿಯಾಯ್ತು ‘ಗುಜರಾತ್ ಮಾಡೆಲ್’
ಗುಜರಾತ್ ಸಿಎಂ ಆಗಿದ್ದಾಗ ನರೇಂದ್ರ ಮೋದಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿತು. 13 ವರ್ಷಗಳ ಸುದೀರ್ಘ ಆಡಳಿತದಲ್ಲಿ ಅಭೂತಪೂರ್ವ ಕೆಲಸಗಳನ್ನು ಮಾಡಿದರು. ‘ರಾಜ್ಯಕ್ಕೆ ಪರಿವರ್ತಕ ಅವಧಿ’ ಎಂದೇ ಪರಿಗಣಿಸಲಾಗಿತ್ತು. ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ಧಿಯಿಂದ ಗುಜರಾತ್ ಭಾರತದ ಅತ್ಯಂತ ಶ್ರೀಮಂತ ಮತ್ತು ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿತು. ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವುದೇ ಮುಂದೆ ಬಿಜೆಪಿ ಪ್ರಚಾರದ ಘೋಷಣೆಯಾಯಿತು.
ರಾಷ್ಟ್ರ ರಾಜಕಾರಣದಲ್ಲಿ ‘ನಮೋ’ ಛಾಪು
ಅದಾಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆ ಎದ್ದಿತ್ತು. ಸತತ ಎರಡು ಅವಧಿ ಆಡಳಿತ ನಡೆಸಿದ್ದ ಸಿಂಗ್ ಸರ್ಕಾರ ವ್ಯಾಪಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ನೇತೃತ್ವವನ್ನು ನರೇಂದ್ರ ಮೋದಿ ವಹಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ಪಕ್ಷದೊಳಗೆ ವ್ಯಕ್ತವಾದವು. ಗುಜರಾತ್ ಅಭಿವೃದ್ಧಿ ಮಾದರಿ ಹಾಗೂ ಜನರನ್ನು ಮಂತ್ರಮುಗ್ಧರನ್ನಾಗಿಸುವ ಮೋದಿ ಮಾತುಗಾರಿಕೆ ಕೆಲಸ ಮಾಡಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿಂದೆಂದೂ ಕಾಣದ ರೀತಿಯಲ್ಲಿ ಅಮೋಘ ಗೆಲುವು ದಾಖಲಿಸಿತು. ಇದನ್ನೂ ಓದಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ
ನರೇಂದ್ರ ಮೋದಿ ಪರ್ವ
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. ಆಗ ಗುಜರಾತ್‌ನ ವಡೋದರಾ ಮತ್ತು ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದ ಮೋದಿ ಎರಡೂ ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆದರು. 2014ರ ಮೇ 26 ರಂದು ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದರು. ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ಪಕ್ಷ ಮೊದಲ ಬಾರಿಗೆ ಸ್ವತಂತ್ರವಾಗಿ ಅಧಿಕಾರದ ಗದ್ದುಗೆ ಏರಿತು. ಅದರ ಎಲ್ಲಾ ಶ್ರೇಯಸ್ಸು ಮೋದಿ ಅವರಿಗೇ ಸಲ್ಲಬೇಕು. ಅವರ ಜೊತೆಗೆ ಚಾಣಕ್ಯನಂತೆ ಅಮಿತ್ ಶಾ ಕೆಲಸ ಮಾಡಿದರು. ದೇಶದಲ್ಲಿ ಸ್ವಚ್ಛಭಾರತ ಅಭಿಯಾನ ಆರಂಭಿಸಿ ಮೋದಿ ಮನೆ ಮಾತಾದರು. ಜಿಎಸ್‌ಟಿ ಜಾರಿ, ನೋಟು ಅಮಾನ್ಯೀಕರಣದಂತಹ ಹಲವು ಕಠಿಣ ಕ್ರಮಗಳನ್ನು ಕೈಗೊಂಡರು. ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ವಿವಾದಕ್ಕೂ ಗುರಿಯಾದರು.
2019ರಲ್ಲಿ ಮೋದಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಅವಧಿಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಬೀಗಿತು. ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಮೋದಿ ಆಡಳಿತದಲ್ಲಿ ಭಾರತದ ಜಿಡಿಪಿ ಮತ್ತಷ್ಟು ಸುಧಾರಣೆ ಕಂಡಿತು. ದೇಶಾದ್ಯಂತ ಹಲವು ಅಭಿವೃದ್ಧಿ ಕಾರ್ಯಗಳಾದವು. ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಕಂಡವು. ವಿದೇಶಾಂಗ ನೀತಿಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆ ಕಂಡಿತು. ಭಾರತವು ವಿಶ್ವದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಗಳಿಸಲು ಮೋದಿ ಶ್ರಮಿಸಿದರು.
3ನೇ ಆರ್ಥಿಕ ರಾಷ್ಟ್ರವಾಗುತ್ತಾ ಭಾರತ?
ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಈಗ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭಾರತವನ್ನು ವಿಶ್ವದ ಟಾಪ್ 3 ಆರ್ಥಿಕ ರಾಷ್ಟ್ರ ಮಾಡುವುದಾಗಿ ಮೋದಿ ಸಂಕಲ್ಪ ಮಾಡಿದ್ದರು. ಅದರಂತೆ ಮೋದಿ ನಾಯಕತ್ವಕ್ಕೆ ಭಾರತದ ಜನತೆ ಮತ್ತೆ ಜೈ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಪ್ರಮಾಣವಚನ ಸ್ವೀಕಾರ
ವಿಶ್ವ ಮೆಚ್ಚಿದ ನಾಯಕ ಮೋದಿ
ವಿಶ್ವದ ಜನಪ್ರಿಯ ನಾಯಕರಲ್ಲಿ ನರೇಂದ್ರ ಮೋದಿ ಮೊದಲ ಸ್ಥಾನ ಗಳಿಸಿದ್ದಾರೆ. ಜಾಗತಿಕ ರಾಷ್ಟ್ರಗಳ ಯುದ್ಧದ ಸಂದರ್ಭದಲ್ಲಿ ಭಾರತದ ನಡೆ ಜಗತ್ತಿನ ಗಮನ ಸೆಳೆದಿದೆ. ಮೋದಿಯಂತಹ ನಾಯಕತ್ವ ಬೇಕು ಎಂಬ ಮಾತುಗಳು ಜಾಗತಿಕ ನಾಯಕರಿಂದ ಕೇಳಿಬರುತ್ತಿದೆ. ನೆರೆರಾಷ್ಟ್ರ ಪಾಕಿಸ್ತಾನ ಕೂಡ ಮೋದಿ ಆಡಳಿತವನ್ನು ಗುಣಗಾನ ಮಾಡುತ್ತಿರುವುದು ದೇಶದ ಅಭಿವೃದ್ಧಿ ಪಥಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಎನ್‌ಡಿಎ ಒಕ್ಕೂಟಕ್ಕೆ ಜಯ
2024ರ ಚುನಾವಣೆಯಲ್ಲಿ ಭಾರತೀಯರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನ ಗೆದ್ದಿದೆ. ಎನ್‌ಡಿಎ ಒಕ್ಕೂಟ 293 ಸ್ಥಾನಗಳಲ್ಲಿ ಜಯಗಳಿಗೆ ಅಧಿಕಾರದ ಗದ್ದುಗೆ ಏರಿದೆ. ಆರ್ಥಿಕತೆಯಲ್ಲಿ ಭಾರತವನ್ನು ಮುಂಚೂಣಿಗೆ ತರುವ, ಆತ್ಮನಿರ್ಭರ ಭಾರತ ನಿರ್ಮಾಣದ ಸಂಕಲ್ಪವನ್ನು ಮೋದಿ ಮಾಡಿದ್ದಾರೆ.