ಕಳೆದ 10 ವರ್ಷದಿಂದ ಟಿ.ವಿ ನೋಡ್ತಿಲ್ಲ, ಪೇಪರ್ ಓದ್ತಿಲ್ಲ- ಸಚಿವ ಅನಂತ್ ಕುಮಾರ್ ಹೆಗ್ಡೆ

Public TV
2 Min Read
kwr ananth kumar

ಕಾರವಾರ: ಪತ್ರಿಕೆಯಲ್ಲಿ, ಟಿ.ವಿಯಲ್ಲಿ ನಮ್ಮ ಪರವಾಗಿ ಬರೆಯೋದಿಲ್ಲ. ಅವರು ಬೇಕಾದ್ದು ಬರೆದುಕೊಂಡು ಹೋಗಲಿ ನೀವ್ಯಾರೂ ತಲೆಕೆಡಿಸಿಕೊಳ್ಳಬೇಡಿ. ಕಳೆದ ಹತ್ತು ವರ್ಷದಿಂದ ನಾನು ಟಿ.ವಿ ನೋಡುತ್ತಿಲ್ಲ, ಪೇಪರ್ ಓದುತ್ತಿಲ್ಲ ಅದಕ್ಕೋಸ್ಕರ ನನ್ನ ತಲೆ ಸರಿ ಇದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

ಅಂಕೋಲ ತಾಲೂಕಿನ ಅಲಗೆರೆಯಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯಾರೂ ಟಿವಿ, ಪೇಪರ್ ನೋಡ್ತಾರೋ ಅವರ ತಲೆ ದಿನ ಹಾಳಾಗುತ್ತದೆ. ತಲೆ ಸರಿ ಇರಬೇಕು, ಡಯಾಬಿಟಿಕ್ ಸರಿ ಇರಬೇಕು, ಬಿಪಿ ಸರಿ ಇರಬೇಕು ಎಂದರೆ ಟಿ.ವಿ ನೋಡಬೇಡಿ ಪೇಪರ್ ಓದಬೇಡಿ. ನಿಮಗೆ ಕುತೂಹಲ, ಟೆನ್ಷನ್, ಅದು ಹಂಗಾಗುತ್ತೆ, ಹಿಂಗಾಗುತ್ತೆ, ಮಹಾಘಟಬಂದನ್ ಹಾಗಾದ್ರೆ ಮಹಾ ಸ್ಫೋಟ, ಎಂತದ್ದೂ ಆಗೋದಿಲ್ಲ ಆಗೋದು ಘಟಸ್ಫೋಟವೇ. ಬೇರೆ ಎಂತದ್ದೂ ಆಗೋದಿಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

kwr ananth kumar 3

ಮಾಧ್ಯಮದ ಮೇಲೆ ಸಿಟ್ಟು ಯಾಕೆ..?
ಕಳೆದ ಒಂದು ತಿಂಗಳ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ ಮಾಧ್ಯಮಗಳನ್ನು ತುಚ್ಛವಾಗಿ ನಡೆಸಿಕೊಂಡಿದ್ದರು. ಇದಲ್ಲದೇ ರಾಜ್ಯದಲ್ಲಿ ಬಿಜೆಪಿ ಆಪರೇಶನ್ ಹಾಗೂ ಶಾಸಕರ ಖರೀದಿ ಕುರಿತು ಪ್ರತಿಕ್ರಿಯೆಯನ್ನು ಮಾಧ್ಯಮದವರು ಪಡೆಯಲು ತೆರಳಿದಾಗ ಅವರ ಅಂಗ ರಕ್ಷಕರು ಪತ್ರಕರ್ತರನ್ನು ತಳ್ಳಿ ದೂಡಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಾರವಾರದ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಪತ್ರಕರ್ತರಿಗೆ ಗೇಲಿ ಮಾಡಿದ್ದರು. ಇದರಿಂದಾಗಿ ಪತ್ರಕರ್ತರು ಅವರ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು.

ಇದರ ಬಿಸಿ ಹೇಗಿತ್ತೆಂದರೆ ಕೆಲವು ವಾರಗಳ ಹಿಂದೆ ಅಂಕೋಲದಲ್ಲಿ ನಡೆದ ಪಾಸ್ ಪೋರ್ಟ್ ಕೇಂದ್ರದ ಉದ್ಘಾಟನೆ ವೇಳೆ ಸಚಿವರು ಮಾತನಾಡಲು ನಿಂತಿದ್ದರು ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಯಾವೊಬ್ಬ ಪತ್ರಕರ್ತರೂ ತೆರಳಲಿಲ್ಲ. ಇದರಿಂದಾಗಿ ಮುಜುಗರಗೊಂಡ ಸಚಿವರು ತಮ್ಮ ಆಪ್ತ ಮುಖಂಡರ ಬಳಿ ಚರ್ಚಿಸಿದ್ದರು ಕೂಡ. ಇದಾದ ನಂತರ ಸಚಿವರಿಗೆ ಮಾಧ್ಯಮಗಳ ಮೇಲೆ ಮತ್ತಷ್ಟು ಕೋಪ ಹೆಚ್ಚಾಗಿದೆ. ಸದಾ ಅವರ ಸುತ್ತ ತಿರುಗುತಿದ್ದ ಮಾಧ್ಯಮಗಳ ಮೇಲೆ ತಮ್ಮ ನಾಲಿಗೆ ಹರಿಬಿಡುತ್ತಿದ್ದು ಮಾಧ್ಯಮಗಳು ಎಡಪಂಥಿಯರ ಪರವಿದೆ ನಮ್ಮ ಸುದ್ದಿಗಳನ್ನು ಮಾಡುವುದಿಲ್ಲ ಎಂದು ತಮ್ಮ ಕೋಪ ಹೊರಹಾಕಿದ್ದಾರೆ.

kwr ananth kumar 2

ಕಾರ್ಯಕರ್ತರ ಸಂಖ್ಯೆ ಏರಿಕೆ:
ಮುಂದಿನ ಚುನಾವಣೆ ಬಿಜೆಪಿ ಗೆಲುವಿನ ಚುನಾವಣೆ. ಕಳೆದ ವರ್ಷ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಮೂರು ಮುಕ್ಕಾಲು ಕೋಟಿ ಬಿಜೆಪಿ ಕಾರ್ಯಕರ್ತರಿದ್ದರು. ಅವರು ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಮಾಡಿದ್ರು. ಇಂದು ನಮ್ಮ ಕಾರ್ಯಕರ್ತರ ಸಂಖ್ಯೆ ಹದಿಮೂರುವರೆ ಕೋಟಿ ಇದೆ. ಮೂರು ಮುಕ್ಕಾಲು ಕೋಟಿ ಜನರೇ ದೇಶದ ವ್ಯವಸ್ಥೆ ಬದಲಾವಣೆ ಮಾಡಿದರೂ ಎಂದರೆ ನಮ್ಮ ಹದಿಮೂರುವರೆ ಕೋಟಿ ಜನರು ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ನೋಡಿ ಎಂದರು.

ಮುಂದಿನ ಚುನಾವಣೆಯಲ್ಲಿ ಜನರ ಬಳಿ ವೋಟು ಕೇಳಲು ಹೋಗುತ್ತಿಲ್ಲ. ಜನರ ಹತ್ತಿರ ಈ ದೇಶದ ಭವಿಷ್ಯಕ್ಕೋಸ್ಕರ ಬದುಕನ್ನು ಕೇಳಲು ಹೋಗುತಿದ್ದೇವೆ. ಈ ದೇಶ ಮುಂದಿನ ಸಾವಿರ ವರ್ಷ ಕಾಲ ಜೀವಂತವಾಗಿರಬೇಕು ಎಂದರೆ ಧರ್ಮ ಜೀವಂತವಾಗಿರಬೇಕು ಎಂದರೆ ನಮಗೆ ಅವಕಾಶ ಕೊಡಿ ಎಂದು ಕೇಳುತ್ತೇವೆ. ಯಾವುದೇ ಕ್ಷುಲ್ಲಕ ರಾಜಕಾರಣ ಮಾಡಲು ಅಲ್ಲ. ಅಲ್ಲಿ 25 ಸಾವಿರ ಹಣ ಕೊಡುತ್ತೇನೆ ನನ್ನ ಫೋಟೋ ಹಾಕಿಕೊಳ್ಳಲಿ. 50 ಸಾವಿರ ಕೊಡುತ್ತೇನೆ ನನ್ನ ಫೋಟೋ ಹಾಕಿಕೊಳ್ಳಿ. ಈ ರೀತಿ ರಾಜಕಾರಣ ಮಾಡಲು ಅಲ್ಲ ಎಂದು ಟೀಕಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *