Connect with us

Dakshina Kannada

ನ.13-18 ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ- ಸಮಾಲೋಚನಾ ಸಭೆಯ ಸಂಪೂರ್ಣ ವಿವರ ಇಲ್ಲಿದೆ..

Published

on

ಮಂಗಳೂರು: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ನವೆಂಬರ್ 13ರಿಂದ 18ರ ವರೆಗೆ ನಡೆಯಲಿದ್ದು, ಸಮಾಲೋಚನಾ ಸಭೆ ಮಂಗಳವಾರ ಶ್ರೀ ಸನ್ನಿಧಿಯ ಅತಿಥಿಗೃಹದಲ್ಲಿ ನಡೆಯಿತು.

ಇದೇ 16ರಂದು ಗುರುವಾರ ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನವನ್ನು ವೆಲ್ಲೂರಿನ ಶ್ರೀ ನಾರಾಯಣೀ ಪೀಠಮ್‍ನ ಶ್ರೀಶಕ್ತಿ ಅಮ್ಮ ಉದ್ಘಾಟಿಸಲಿರುವರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಪ್ರಜಾವಾಣಿ ದೈನಿಕದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಮಾಜಿ ಶಾಸಕ ಶಪಿ ಅಹಮ್ಮದ್ ಮತ್ತು ಫಾದರ್‍ಅಂತೋನಿ ರಾಜ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ರಾತ್ರಿ 9 ರಿಂದ ಕಿರುತೆರೆ ಕಲಾವಿದರಾದ ಮೈಸೂರು ಮಂಜುನಾಥ ಹಾಗೂ ಮೈಸೂರು ನಾಗರಾಜ ವೃಂದದವರಿಂದ ಪಿಟೀಲು ಜುಗಲ್‍ಬಂದಿ ಕಾರ್ಯಕ್ರಮವಿದೆ. ಇದೇ 17ರಂದು ಶುಕ್ರವಾರ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನವನ್ನು ಖ್ಯಾತ ಸಾಹಿತಿ ಸುಧಾ ಮೂರ್ತಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅಧ್ಯಕ್ಷತೆ ವಹಿಸಲಿದ್ದರೆ, ಖ್ಯಾತ ವಿಮರ್ಶಕಎಸ್. ಆರ್. ವಿಜಯಶಂಕರ್, ಸಾಹಿತಿ ರಂಜಾನ್‍ದರ್ಗಾ ಮತ್ತು ಮಂಗಳೂರಿನ ಪ್ರೊ.ಭುವನೇಶ್ವರಿ ಹೆಗಡೆ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9 ರಿಂದ ಬೆಂಗಳೂರಿನ ರಾಧಾಕಲ್ಪ ನೃತ್ಯತಂಡದ ಕಲಾವಿದರಿಂದ ಭರತನಾಟ್ಯ ಪ್ರದರ್ಶನವಿದೆ.

ಸಮಾಲೋಚನಾ ಸಭೆ: ಲಕ್ಷದೀಪೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಸಮಾಲೋಚನಾ ಸಭೆ ಮಂಗಳವಾರ ನಡೆಯಿತು. ಧರ್ಮಸ್ಥಳಕ್ಕೆ ಮಂಗಳೂರು, ಪುತ್ತೂರು, ಪೆರಿಯಶಾಂತಿ, ಚಾರ್ಮಾಡಿ, ಪಟ್ರಮೆ, ಕಾರ್ಕಳ, ಬೆಳಾಲು, ನೆರಿಯಾ ಮೊದಲಾದ ಊರುಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವ ಬಿ.ರಮಾನಾಥರೈ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆ.ಎಸ್.ಆರ್.ಟಿ.ಸಿ. ವತಿಯಿಂದ ರಾಜ್ಯದ ವಿವಿಧ ಭಾಗಗಳಿಂದ ವಿಶೇಷ ಬಸ್ ಸೌಲಭ್ಯ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ, ಗೃಹ ರಕ್ಷಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಶೀಘ್ರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಚಿವರು ಸಲಹೆ ನೀಡಿದರು.

ಕರ್ತವ್ಯಕ್ಕೆ ಬದ್ಧರಾಗಿ: ಲಕ್ಷ ದೀಪೋತ್ಸವದ ಮೊದಲ ಆಮಂತ್ರಣ ಪತ್ರವನ್ನು ಸಚಿವ ರಮಾನಾಥರೈ ಗಳಿಗೆ ನೀಡಿ ಸ್ವಾಗತಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಲಕ್ಷ ದೀಪೋತ್ಸವಕ್ಕೆ ಬರುವ ಭಕ್ತರನ್ನು ಅತಿಥಿಗಳಾಗಿ ಸ್ವಾಗತಿಸಿ ಎಲ್ಲರೂ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು. ಸರ್ಕಾರದ ಎಲ್ಲಾ ಇಲಾಖಾಧಿಕಾರಿಗಳು ಕರ್ತವ್ಯಕ್ಕೆ ಬದ್ಧರಾಗಿ, ಸಿದ್ಧರಾಗಿ ತಮ್ಮಕರ್ತವ್ಯ ಮಾಡಬೇಕು. ಉತ್ಸವ ಯಶಸ್ವಿಗೆ ದೇವರ ಅನುಗ್ರಹದೊಂದಿಗೆ ಮನುಷ್ಯ ಪ್ರಯತ್ನವೂ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಹಾಯಕ ಆಯುಕ್ತ ರಘುನಂದನ್ ಮೂರ್ತಿ, ದ.ಕ.ಜಿಲ್ಲಾ ಪಂಚಾಯತಿ ಅಧ್ಯಕ್ಷೆ, ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣರಾವ್, ಜಿಲ್ಲಾಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ಧಾರ್ಮಿಕ ಮತ್ತುದತ್ತಿ ಇಲಾಖಾ ಸಹಾಯಕ ಆಯುಕ್ತೆ ಕೆ.ಪ್ರಮೀಳಾ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ ಉಪಸ್ಥಿತರಿದ್ದು ಸೂಕ್ತ ಸಲಹೆ-ಸೂಚನೆ ನೀಡಿದರು. ಈ ವೇಳೆ ಡಿ. ಹರ್ಷೇಂದ್ರಕುಮಾರ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಸುಭಾಶ್ಚಂದ್ರ ಜೈನ್ ಇದ್ದರು.

Click to comment

Leave a Reply

Your email address will not be published. Required fields are marked *