ರಾಯಚೂರು: ಗಣೇಶ ಹಬ್ಬ ಅಂದ್ರೆ ಅದರ ಸಂಭ್ರಮ, ಮೆರವಣಿಗೆ ಅಬ್ಬರಾನೇ ಬೇರೆ. ಆದ್ರೆ ವಿನಾಯಕನ ಮೆರವಣಿಗೆ ವೇಳೆ ಕೋಮು ಸೌಹಾರ್ದ ಕದಡುವಂತಹ ಕಹಿ ಘಟನೆಗಳು ಅಲ್ಲಲ್ಲಿ ಈಗಲೂ ನಡೆಯುತ್ತಲೇ ಇರುತ್ತವೆ. ಪೊಲೀಸರಿಗಂತೂ ಕಾನೂನು ಸುವ್ಯವಸ್ಥೆ ಕಾಪಾಡುವುದು ದೊಡ್ಡ ಸವಾಲೇ ಸರಿ. ಆದ್ರೆ ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಒಂಬತ್ತು ವರ್ಷಗಳಿಂದ ಗಣೇಶನನ್ನ ನಿರ್ಮಿಸುವ ಮೂಲಕ ಸೌಹಾರ್ದತೆಯ ಸಂಕೇತವಾಗಿದ್ದಾರೆ.
ಹೌದು. ರಾಯಚೂರಿನ ಶಕ್ತಿನಗರದ ನಿವಾಸಿಯಾಗಿರುವ ಫಿರೋಜ್, ಧಾನ್ಯಗಳನ್ನ ಜೋಡಿಸಿ, ಗೋಣಿ ಚೀಲ ಹೊಲಿದು ಬಣ್ಣ ಬಳಿಯುವ ಮೂಲಕ ಕಳೆದ ಒಂಬತ್ತು ವರ್ಷಗಳಿಂದ ನಗರದ ತೀನ್‍ಕಂದಿಲ್‍ನ ಕಲ್ಲಾನೆ ಮೇಲೆ ಗಣೇಶನನ್ನ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ
ಕಲ್ಲಾನೆ ಗಜಾನನ ಮಹೋತ್ಸವ ಸಮಿತಿಯೂ ಸಹ ಸೌಹಾರ್ದತೆ ಮೆರೆದು ಫಿರೋಜ್ ನಿಂದ ಗಣೇಶನ ವಿಗ್ರಹ ನಿರ್ಮಾಣ ಕಾರ್ಯ ಮಾಡಿಸುತ್ತಿದೆ. ಉಳಿದ ಸಮಯದಲ್ಲಿ ಲಕ್ಷ್ಮಿ ವಿಗ್ರಹ ಸೇರಿ ಹೊಸ ಮನೆಗಳಿಗೆ ಕಬ್ಬಿಣದ ಕೆಲಸವನ್ನ ಮಾಡುವ ಫಿರೋಜ್ ಗಣೇಶನ ಹಬ್ಬಕ್ಕೆ ಮಾತ್ರ ಕಲ್ಲಾನೆ ಗಣೇಶನ ನಿರ್ಮಾಣಕ್ಕೆ ಹಾಜರಾಗಿರುತ್ತಾರೆ. ಕಾಯಕದಲ್ಲೇ ದೇವರನ್ನ ಕಾಣುವ ಫಿರೋಜ್ ಗಣೇಶನನ್ನ ನಂಬಿದ್ದಾರೆ. ಈ ಬಾರಿ ಒಂದೆಡೆ ಅತಿವೃಷ್ಠಿ ಇನ್ನೊಂದೆಡೆ ಅನಾವೃಷ್ಠಿ ಇರುವುದರಿಂದ ಫಿರೋಜ್ ಕೈಯಲ್ಲಿ 35 ಅಡಿ ಎತ್ತರದ ವಾಸ್ತು ನವಧಾನ್ಯ ಗಣೇಶನನ್ನ ಮಾಡಿಸಲಾಗಿದೆ.
ಕಳೆದ 35 ವರ್ಷಗಳಿಂದ ಕಲ್ಲಾನೆಯ ಮೇಲೆ 35 ಅಡಿ ಎತ್ತರದ ಗಣೇಶನನ್ನ ಪ್ರತಿಷ್ಠಾಪಿಸುತ್ತಿರುವ ಕಲ್ಲಾನೆ ಗಜಾನನ ಸಮಿತಿ, ಈ ಬಾರಿ ನವಧಾನ್ಯಗಳ ಮೂಲಕ ವಿಘ್ನನಿವಾರಕನನ್ನ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ನಗರದಲ್ಲಿ ಈ ಬಾರಿಯ ಗಣೇಶ ಮಹೋತ್ಸವು ಹಲವು ವಿಶೇಷತೆಗಳನ್ನ ಹೊಂದಿದೆ. ಚಂದ್ರಮೌಳೇಶ್ವರ ವೃತ್ತದಲ್ಲಿ ಗಜಾನನ ಭಕ್ತ ಮಂಡಳಿ 3 ಕ್ವಿಂಟಾಲ್ ಗಣೇಶನನ್ನ ಕೂಡಿಸಿದ್ದು, ಆಂಧ್ರಪ್ರದೇಶದಿಂದ 300 ಮಣ್ಣಿನ ಗಣೇಶ ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಶ್ರೀರಾಮನಗರ ಕಾಲೋನಿಯಲ್ಲಿ ಗೋಲ್ಡನ್ ಟೆಂಪಲ್ ನಿರ್ಮಿಸಿ ಬೃಹದಾಕಾರದ ಗಣೇಶನನ್ನ ಕೂಡಿಸಲಾಗಿದೆ ಅಂತ ಗಜಾನನ ಭಕ್ತ ಮಂಡಳಿಯ ಅನಿಲ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಯಚೂರಿನಲ್ಲಿ ಹಿಂದೂ-ಮುಸ್ಲಿಂ ಎನ್ನದೆ ಧರ್ಮ-ಭೇದ ಮರೆತು ಗಣೇಶ ಹಬ್ಬ ಆಚರಣೆಗೆ ಮುಂದಾಗಿರುವುದು ನಿಜಕ್ಕೂ ಖುಷಿಯ ವಿಚಾರ. ಜೊತೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸದೆ ಪರಿಸರ ಸ್ನೇಹಿ ಗಣೇಶ ಕೂಡಿಸುವವರ ಸಂಖ್ಯೆ ಈ ಬಾರಿ ಹೆಚ್ಚಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv