– ಅಂಬರೀಶ್ ವಿರುದ್ಧ ರಂಜಿತಾ ಸ್ಪರ್ಧೆ
ಮಂಡ್ಯ: 2018 ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದೆ ರಮ್ಯಾ ಅವರ ತಾಯಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ಇನ್ನೊಂದು ವಾರದಲ್ಲಿ ಮಂಡ್ಯಕ್ಕೆ ಬಂದು ಬೆಂಬಲಿಗರ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿರುವ ರಮ್ಯಾ ತಾಯಿ ರಂಜಿತಾ, ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. 1980ರ ದಶಕದಲ್ಲಿ 2 ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದೇವೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ಮನೆ ಮನೆ ಬಾಗಿಲಿಗೆ ಹೋಗಿ ಕ್ಯಾಂಪೇನ್ ಮಾಡಿದ್ದೇವೆ. ಆದ್ರೆ ಕಾಂಗ್ರೆಸ್ ಪಕ್ಷದವರು ಪಕ್ಷಕ್ಕಾಗಿ ದುಡಿದ ನಮ್ಮನ್ನು ಕಡೆಗಣಿಸಿದ್ದಾರೆ ಅಂತ ತನ್ನ ಅಳಲುತೋಡಿಕೊಂಡಿದ್ದಾರೆ.
ರಮ್ಯಾ ಅವರು ಸೋತ ನಂತರ ಅವರಿಗೂ ಯಾವುದೇ ಸ್ಥಾನಮಾನ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಒಳಗಿದ್ದುಕೊಂಡೇ ರಮ್ಯಾರನ್ನು ಸೋಲಿಸಿದ್ರು. ರಾಜ್ಯ ರಾಜಕಾರಣದಲ್ಲಿ ರಮ್ಯಾರನ್ನು ಕಡೆಗಣಿಸಲಾಗಿದೆ. ಇದೆಲ್ಲ ಮನಸ್ಸಿಗೆ ನೋವುಂಟು ಮಾಡಿದೆ. ಈ ನೋವು ರಮ್ಯಾಗೂ ಇದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತೇನೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಜನ ಆಶೀರ್ವಾದ ಮಾಡಿದ್ರೆ ಅವರ ಸೇವೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಕೇಳುತ್ತಿದ್ದೆ. ಆದ್ರೆ ಅಂಬರೀಶ್ ಅಣ್ಣ ಕಾಂಗ್ರೆಸ್ ಪಕ್ಷದಿಂದ ಎಲೆಕ್ಷನ್‍ಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಪಕ್ಷದಿಂದ ಟಿಕೆಟ್ ಕೇಳಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ರಮ್ಯಾ ಜೊತೆ ಮಾತನಾಡಿಲ್ಲ. ರಮ್ಯಾರನ್ನು ನಂಬಿ ಓಟ್ ಮಾಡಿದ ಮತದಾರರಿಗಾಗಿ ದುಡಿಯಬೇಕಿದೆ. ಹಾಗಾಗಿ ಚುನಾವಣೆಗೆ ನಿಲ್ಲುತ್ತೇನೆ ಅಂತ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.