LatestNational

ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ

ನವದೆಹಲಿ: ಆದಾಯ ತೆರಿಗೆ ಪಾವತಿಸಲು ಇನ್ನು ಮುಂದೆ ಪಾನ್ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.

ದೆಹಲಿ ಹೈಕೋರ್ಟ್ ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಐಟಿ ರಿಟರ್ನ್ಸ್ ಪಾವತಿ ಮಾಡಲು 2018-19 ಸಾಲಿಗೆ ಆಧಾರ್ ಕಡ್ಡಾಯ ಮಾಡಿ ಆದೇಶ ನೀಡಿದೆ.

ಈಗಾಗಲೇ ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದ್ದು, ಸದ್ಯ ಎಲ್ಲಾ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್ ಆಧಾರ್ ಕಾರ್ಡಿಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸೆಪ್ಟೆಂಬರ್ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು. ಆದರೂ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿತ್ತು. ಆದರೆ ಈಗ ನ್ಯಾಯಾಲಯ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಲು ವೈಯಕ್ತಿಕ ಆಧಾರ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯ ಮಾಡಿದೆ.

ಆಧಾರ್ ಕಾರ್ಡನ್ನು ಪಾನ್ ಕಾರ್ಡಿಗೆ ಲಿಂಕ್ ಮಾಡಲು 2019 ಮಾರ್ಚ್ 31 ರವರೆಗೂ ಸಮಯಾವಕಾಶವನ್ನು ನೀಡಿದೆ. 2018 ಏಪ್ರಿಲ್ 1 ರಂದು ಸರ್ಕಾರದ ನೀಡಿದ್ದ ಆದೇಶದ ಅನ್ವಯ ಐಟಿ ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ ಕನಿಷ್ಠ 10 ಸಾವಿರ ರೂ. ಶುಲ್ಕವನ್ನು ವಿಧಿಸಬಹುದಾಗಿದೆ. ಅಲ್ಲದೇ ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ಸ್ ಸಲ್ಲಿಸದವರಿಗೆ ಸೆಕ್ಷನ್ 142(1) ಅನ್ವಯ ನೋಟಿಸ್ ಕಳುಹಿಸಲು ಅವಕಾಶವಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button