ಹುಬ್ಬಳ್ಳಿ: ನಗರದ ಗಿರಣಿಚಾಳನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ.
ಜನವರಿ 26ರಂದು ಹುಬ್ಬಳ್ಳಿಯ ಗಿರಣಿಚಾಳ ಬಡಾವಣೆಯಲ್ಲಿ ಮನೆ ಮುಂದೆ ರಾತ್ರಿ ಮಲಗಿದ್ದಾಗ ವಿಜಯ್ ಕಿರೇಸೂರು ಎಂಬ ಯುವಕನಿಗೆ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದ. ಇತ್ತ ಯುವಕನ ತಾಯಿ ಕೂಡ ರಾತ್ರಿ ಮನೆಯ ಮುಂದೆ ಮಲಗಿದ್ದು ಸೊಳ್ಳೆ ಹೆಚ್ಚಾಗಿದ್ದರಿಂದ ಬೆಂಕಿ ಹಚ್ಚಿಕೊಂಡು ಮಲಗಿದ್ದ. ಬೆಂಕಿ ಹಾಸಿಗೆಗೆ ತಗುಲಿ ಹೊತ್ತಿ ಉರಿದಿದೆ ಎಂದು ಪೊಲೀಸರಿಗೆ ಹೇಳಿಕೆಯೊಂದಿಗೆ ದೂರನ್ನು ನೀಡಿದ್ದರು.
ಈ ಕುರಿತಂತೆ ಉಪನಗರ ಪೊಲೀಸರು ಕೂಡ ಯುವಕನ ಸಾವಿನ ಕುರಿತಂತೆ ತನಿಖೆ ನಡೆಸುತ್ತಿದ್ದರು. ಇವೆಲ್ಲದರ ನಡುವೆ ಪೊಲೀಸರು ತನಿಖೆ ಮಾಡುತ್ತಿರುವಾಗಲೇ ಈ ಕೇಸ್ ಹೊಸದೊಂದು ತಿರುವು ಪಡೆದುಕೊಂಡಿದೆ.
ಇದೊಂದು ಸಹಜ ಸಾವಲ್ಲ, ಬೆಂಕಿ ಹಚ್ಚಿ ವಿಜಯ್ ನನ್ನು ಸಾಯಿಸಿದ್ದಾರೆ ಎಂಬ ಸತ್ಯ ಹೊರಬಂದಿದೆ. ವಿಜಯ್ ತನ್ನ ಸ್ನೇಹಿತರ ಬಳಿ 45,000ರೂ. ಹಣವನ್ನು ಪಡೆದಿದ್ದ. ಅದನ್ನು ಹಿಂದಿರುಗಿಸಲಿಲ್ಲ ಎಂದು ಆತನ ನಾಲ್ಕು ಜನ ಸ್ನೇಹಿತರು ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ವಿಜಯ್ ಅವರ ದೊಡಪ್ಪ ಹೇಳಿಕೆ ನೀಡಿದ್ದಾರೆ.