ರಾಮನಗರ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮದ್ಯಸೇವನೆ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಸ್ನೇಹಿತರೇ ಯುವಕನೋರ್ವನ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಗುಡಿಮಾವು ಗ್ರಾಮದಲ್ಲಿ ನಡೆದಿದೆ.
ದೇವಗೆರೆ ಗ್ರಾಮದ ನಿವಾಸಿ ನವೀನ್(27) ಕೊಲೆಯಾದ ಯುವಕ. ಕಳೆದ ರಾತ್ರಿ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿ ಮಾಡಿದ್ದ ನವೀನ್ ಸ್ನೇಹಿತರಿಂದಲೇ ಹತ್ಯೆಯಾಗಿದ್ದಾನೆ. ಆನಂದ್ ಕುಮಾರ್ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದೇನು?: ಮದ್ಯ ಸೇವನೆ ವೇಳೆ ಸಣ್ಣ ವಿಚಾರಕ್ಕೆ ಕಿರಿಕ್ ನಡೆದಿದೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿ ಹೊಡೆದಾಟ ನಡೆದಿದೆ. ಈ ವೇಳೆ ನವೀನ್ ಸ್ನೇಹಿತರು ಆತನ ಕೊಲೆ ಮಾಡಿ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಹಾರೋಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.