ಬೆಂಗಳೂರು: ಕುಡಿದ ಮತ್ತಲ್ಲಿ ಪ್ರಾಣ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರು ಚಾಲಕ ಕಾರ್ತಿಕ್ ಕೊಲೆಯಾದ ಯುವಕ. ಈ ಘಟನೆ ಶುಕ್ರವಾರ ರಾತ್ರಿ ಸುಮಾರು 12.30ಕ್ಕೆ ನಡೆದಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಗುರು ಪ್ರಸಾದ್, ಕುಡಿದು ಸೋಡಾ ಬಾಟಲಿನಲ್ಲಿ ಸ್ನೇಹಿತನನ್ನು ಹೊಡೆದು ಕೊಲೆ ಮಾಡಿದ್ದಾನೆ. ಸ್ನೇಹಿತನಿಗೆ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಡೆದಿದ್ದೇನು?
ಶುಕ್ರವಾರ ರಾತ್ರಿ ಯುವಕರ ಗುಂಪು ಮಳಿಗೆಯ ಬಾಗಿಲಿನಲ್ಲಿ ಕಂಠಪೂರ್ತಿ ಕುಡಿಯುತ್ತಿತ್ತು. ಕುಡಿದ ಬಳಿಕ ಗುರುಪ್ರಸಾದ್‍ನನ್ನು ಮೃತ ಕಾರ್ತಿಕ್ ಹಿಯಾಳಿಸಿದ್ದನು. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಗುರುಪ್ರಸಾದ್ ತನ್ನ ಕೈಯಲ್ಲಿದ್ದ ಸೋಡಾ ಬಾಟಲ್‍ನಿಂದ ಕಾರ್ತಿಕ್ ತಲೆಗೆ ಹೊಡೆದಿದ್ದಾನೆ. ಈ ವೇಳೆ ಗುಂಪಲ್ಲಿದ್ದ ಇತರ ಯುವಕರನ್ನು ಇವರಿಬ್ಬರ ಜಗಳವನ್ನು ತಡೆಯಲು ಮುಂದಾಗಿದ್ದು ವಿಫಲರಾಗಿದ್ದಾರೆ.
ಪರಿಣಾಮ ಇಬ್ಬರ ಜಗಳ ತಾರಕಕ್ಕೇರಿ ಕಾರ್ತಿಕ್ ಗಾಯಗೊಂಡಿದ್ದಾರೆ. ನಂತರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ಸಾಗಿದ್ದನು. ಆದರೆ ಇಂದು ಬೆಳಗ್ಗೆ ಎದ್ದಾಗ ತಲೆಯಿಂದ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ ಕಾರ್ತಿಕ್‍ನನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇದೀಗ ಕಾರ್ತಿಕ್ ಮೃತಪಟ್ಟಿದ್ದಾನೆ.
ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗುರುಪ್ರಸಾದ್‍ನನ್ನು ಪೊಲೀಸರು ಬಂಧಿಸಿದ್ದಾರೆ.