ನವದೆಹಲಿ: ವಿಮಾನಗಳಿಗೆ ಬಾಂಬ್ ಬೆದರಿಕೆ (Flight Bomb Threat) ಕರೆಗಳ ತಲೆನೋವು ಹೆಚ್ಚಾಗಿದೆ. ಇಂದು ಒಂದೇ ದಿನ ಮತ್ತೆ 95 ಫ್ಲೈಟ್‌ಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
25 ಆಕಾಶ ಏರ್ ವಿಮಾನಗಳು, ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್ ಮತ್ತು ವಿಸ್ತಾರದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಕಳೆದ 10 ದಿನಗಳಲ್ಲಿ 250 ಕ್ಕೂ ಅಧಿಕ ವಿಮಾನಗಳಿಗೆ ಹೀಗೆ ಬೆದರಿಕೆ ಕರೆಗಳು ಬಂದಿವೆ. ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತಿಸುತ್ತಿರುವ ಹೊತ್ತಲ್ಲೂ ಬೆದರಿಕೆ ಕರೆಗಳು ನಿಂತಿಲ್ಲ. ಇದನ್ನೂ ಓದಿ: ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾವು
ಈ ಮೊದಲು ದಿನ ಬಿಟ್ಟು ದಿನ 170 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬಂದಿವೆ. ಅವು ವಂಚನೆ ಕರೆಗಳು ಎಂದು ನಂತರ ಸ್ಪಷ್ಟವಾಯಿತು. ಬೆದರಿಕೆ ಕರೆ ಹಿನ್ನೆಲೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿ ನೂರಾರು ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು. ಅರೆಸೇನಾ ಸಿಬ್ಬಂದಿ ಮತ್ತು ವಾಯುಯಾನ ಅಧಿಕಾರಿಗಳಿಗೆ ಭದ್ರತೆಯು ತಲೆನೋವಾಗಿ ಪರಿಣಮಿಸಿದೆ.
ಬಾಂಬ್ ಬೆದರಿಕೆಯ ಸುಳ್ಳು ಕರೆಗಳಲ್ಲಿ ಭಾಗಿಯಾಗಿರುವವರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲು ಸರ್ಕಾರ ಯೋಜಿಸಿದೆ. ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳನ್ನು ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್
ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಕ್ಸ್ ಖಾತೆಗಳಲ್ಲಿ ಅನಾಮಧೇಯ ಪೋಸ್ಟ್‌ಗಳ ಮೂಲಕ ಬೆದರಿಕೆ ಸಂದೇಶಗಳು ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.