LatestLeading NewsMain PostSports

French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

ಪ್ಯಾರಿಸ್: ಫ್ರೆಂಚ್ ಓಪನ್ 2022 ಪುರುಷರ ಸಿಂಗಲ್ಸ್ ಸೆಮಿಫೈನಲ್‍ನಲ್ಲಿ ಸ್ಪೇನ್‍ನ ರಾಫೆಲ್ ನಡಾಲ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜೆರೆವ್ ನಡುವಿನ ಕಾದಾಟದಲ್ಲಿ ಜೆರೆವ್ ಗಾಯಗೊಂಡು ಹೊರನಡೆದರು. ಈ ವೇಳೆ ರಾಫೆಲ್ ನಡಾಲ್ ತೋರಿದ ಕ್ರೀಡಾ ಸ್ಪೂರ್ತಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫ್ರೆಂಚ್ ಓಪನ್‍ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಚೊಚ್ಚಲ ಬಾರಿಗೆ ಸೆಮಿಫೈನಲ್‍ಗೆ ಪ್ರವೇಶ ಪಡೆದಿದ್ದ ಜೆರೆವ್ ಸೆಮಿಫೈನಲ್‍ನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‍ಗೇರುವ ಕನಸು ಕಂಡಿದ್ದ ಅಲೆಕ್ಸಾಂಡರ್ ಜೆರೆವ್ ಕನಸು ಭಗ್ನವಾಗಿದೆ. ಈ ನಡುವೆ ನಡಾಲ್ ಜೆರೆವ್ ಗಾಯಗೊಂಡು ಮೈದಾನ ತೊರೆಯುವಾಗ ಅವರೊಂದಿಗೆ ಹೆಜ್ಜೆ ಹಾಕಿ ಧೈರ್ಯ ತುಂಬಿದ ನಡೆಗೆ ಕ್ರೀಡಾ ಪ್ರೇಮಿಗಳಿಂದ ಮೆಚ್ಚುಗೆ ಮಾತು ಕೇಳಿಬರುತ್ತಿದೆ.

ನಡಾಲ್ ಹಾಗೂ ಜೆರೆವ್ ನಡುವಿನ ಸೆಮಿಫೈನಲ್ ಕಾದಾಟ ಆರಂಭವಾಗದಾಗಿನಿಂದಲೂ ರೋಚಕವಾಗಿ ಕೋಡಿತ್ತು. 91 ನಿಮಿಷಗಳ ಕಾಲ ನಡೆದ ಮೊದಲ ಸೆಟ್‍ನ್ನು ಟೈ ಬ್ರೇಕರ್ ಮೂಲಕ 7-6 (10-8) ಗೆದ್ದಿದ್ದ ನಡಾಲ್‍ಗೆ 2ನೇ ಸೆಟ್‍ನಲ್ಲೂ ಭಾರೀ ಪೈಪೋಟಿ ಎದುರಾಯಿತು. 6-6 ಅಂಕಗಳಿಂದ ತೀವ್ರ ಜಿದ್ದಾಜಿದ್ದಿನ ಆಟದಲ್ಲಿ ಇಬ್ಬರೂ ಆಟಗಾರರು ಸಮಬಲ ಸಾಧಿಸಿದ್ದರು. ಆ ಬಳಿಕ ಕೆಲ ಕ್ಷಣಗಳಲ್ಲಿ ಜೆರೆವ್ ಜಾರಿ ಬಿದ್ದು ತಮ್ಮ ಬಲ ಮೊಣಕಾಲು ಗಾಯಮಾಡಿಕೊಂಡರು. ಕೂಡಲೇ ಅಂಕಣದಲ್ಲಿ ಕುಸಿದು ಬಿದ್ದ ಜೆರೆವ್ ನೋವಿನಿಂದ ಕಣ್ಣೀರಿಟ್ಟರು. ನಂತರ ಜೆರೆವ್‍ರನ್ನು ವಿಲ್‍ಚೇರ್ ಮೂಲಕ ಅಂಕಣದಿಂದ ಹೊರ ಕರೆದುಕೊಂಡುಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಪಂದ್ಯ ಬಿಟ್ಟುಕೊಡಲು ನಿರ್ಧರಿಸಿದರು. ಇದಾದ ಬಳಿಕ ಊರುಗೋಲು ಹಿಡಿದು ಅಂಕಣಕ್ಕೆ ಬಂದ ಜೆರೆವ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ನಡಾಲ್‍ರನ್ನು ಅಭಿನಂದಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಅಭಿನಂದಿಸಿದರು.

ಇತ್ತ ಜೆರೆವ್ ಗಾಯಗೊಂಡ ತಕ್ಷಣ ಬಳಿ ಬಂದು ನಡಾಲ್ ಗಾಯದ ಬಗ್ಗೆ ತಿಳಿದುಕೊಂಡರು. ಆ ಬಳಿಕ ಮೈದಾನ ತೊರೆದು ಚಿಕಿತ್ಸೆ ಪಡೆದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ಬಿಟ್ಟುಕೊಟ್ಟು ಊರುಗೋಲು ಹಿಡಿದುಕೊಂಡು ಹೊರ ಹೋಗುತ್ತಿದ್ದಂತೆ ನಡಾಲ್ ಅವರೊಂದಿಗೆ ಹೆಜ್ಜೆ ಹಾಕಿದರು.

ನಡಾಲ್ ಈ ಕ್ರೀಡಾ ಸ್ಪೂರ್ತಿ ಕಂಡು ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ ಸೇರಿದಂತೆ ಸಾವಿರಾರು ಕ್ರೀಡಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ನಡಾಲ್ ಭಾನುವಾರ ನಡೆಯಲಿರುವ ಫೈನಲ್‍ನಲ್ಲಿ ನಾರ್ವೆಯ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು ಎದುರಿಸಲಿದ್ದಾರೆ.

Leave a Reply

Your email address will not be published.

Back to top button