ನವದೆಹಲಿ: ರಕ್ಷಾ ಬಂಧನ ಹಬ್ಬದ ಅಂಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ದೆಹಲಿ ಮೆಟ್ರೋ, ದೆಹಲಿ ನಗರ ಸಾರಿಗೆ ಹಾಗೂ ಸ್ಥಳೀಯ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯನ್ನು ಘೋಷಿಸಿದ್ದಾರೆ.
ಅಕ್ಟೋಬರ್ 29ರಿಂದ ಈ ಕಾರ್ಯಕ್ರಮ ಜಾರಿಗೆ ಬರಲಿದ್ದು, ಇದಕ್ಕೆ ‘ಭಾಯ್ ದೂಜ್’ ಎಂದು ಹೆಸರಿಡಲಾಗಿದೆ. ಇಂದು ನಡೆದ ಸ್ವಾತಂತ್ರ್ಯ ದಿನಾಚಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಈ ಯೋಜನೆಯನ್ನು ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿ ಮೆಟ್ರೋ, ದೆಹಲಿ ಸಾರಿಗೆ ಸಂಸ್ಥೆ ಹಾಗೂ ಸ್ಥಳೀಯ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯನ್ನು ಕೇಜ್ರಿವಾಲ್ ಅವರು 2 ತಿಂಗಳ ಹಿಂದೆಯೇ ಘೋಷಿಸಿದ್ದರು. ಆದರೆ, ಇದೀಗ ಅಧಿಕೃತವಾಗಿ ತಿಳಿಸಿದ್ದಾರೆ.
Advertisement
Delhi Chief Minister Arvind Kejriwal: From 29th October, Delhi Transport Corporation (DTC) bus services will be free of charge for women. (File pic) pic.twitter.com/QO8aFFA98D
— ANI (@ANI) August 15, 2019
Advertisement
ರಕ್ಷಾ ಬಂಧನದ ನಿಮಿತ್ತ ನನ್ನ ಸಹೋದರಿಯರಿಗೆ ಅದ್ಭುತ ಉಡುಗೊರೆ ನೀಡುತ್ತಿದ್ದೇನೆ. ಅದುವೇ ಉಚಿತ ಪ್ರಯಾಣದ ವ್ಯವಸ್ಥೆ. ದೆಹಲಿ ಮೆಟ್ರೋ, ದೆಹಲಿ ಸಾರಿಗೆ ಸಂಸ್ಥೆ ಹಾಗೂ ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಅಕ್ಟೋಬರ್ 29ರಿಂದ ಮಹಿಳೆಯರು ಉಚಿತವಾಗಿ ಪ್ರಯಣಿಸಬಹುದಾಗಿದೆ. ಮಹಿಳೆಯರ ಭದ್ರತೆಗಾಗಿ ಈ ಯೋಜನೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಮುಂದಿನ ವರ್ಷ ಜೂನ್ ತಿಂಗಳಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದರ ಭಾಗವಾಗಿ ಈ ಜನಪ್ರಿಯ ಯೋಜನೆಯನ್ನು ಘೋಷಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಈ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುವ ಮೂಲಕ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಹಾಗೂ ಮಹಿಳೆಯರ ಭದ್ರತೆಯ ದೃಷ್ಟಯಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
Advertisement
2019ರ ಲೋಕಸಭಾ ಚುನಾವಣೆ ನಂತರ ಈ ಘೋಷಣೆ ಹೊರ ಬಿದ್ದಿದ್ದು, ಎಎಪಿ 2015ರಿಂದ ಆಡಳಿತ ನಡೆಸುತ್ತಿದ್ದರೂ ಸಹ ಲೋಕಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರದಲ್ಲಿ ಆಪ್ ಜಯಗಳಿಸಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಜ್ರಿವಾಲ್ ಈಗ ಈ ಆಫರ್ ಪ್ರಕಟಿಸಿದ್ದಾರೆ.
ಯೋಜನೆಯಿಂದಾಗಿ ಕೇಜ್ರಿವಾಲ್ ಸರ್ಕಾರಕ್ಕೆ ಸುಮಾರು 700 ಕೋಟಿ ರೂ.ಗಳಷ್ಟು ಹೊರೆಯಾಗಲಿದ್ದು, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯನ್ನು ಘೋಷಿಸಿದ ನಂತರ ಬಿಜೆಪಿ ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸಿದ್ದು, ಮುಖ್ಯಮಂತ್ರಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ದೂರಿದೆ.
ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಇದೇ ರೀತಿ ಮೆಟ್ರೋದಲ್ಲೂ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಮೆಟ್ರೋ ನಿರ್ವಹಣೆ ಅಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೆ, ಮೆಟ್ರೋ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವವಿದೆ. ಒಂದು ವೇಳೆ ಹಣಕಾಸಿನ ವಿಚಾರವಾಗಿ ಕೇಂದ್ರ ಸರ್ಕಾರ ಒಪ್ಪಂದವನ್ನು ಹಿಂಪಡೆದರೆ ರಾಜ್ಯ ಸರ್ಕಾರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಡಸಿದ್ದಾರೆ. ರಕ್ಷಾ ಬಂಧನ ಹಿನ್ನೆಲೆ ಇಂದೂ ಸಹ ಮಹಿಳೆಯರು ದೆಹಲಿಯ ಬಸ್ ಹಾಗೂ ಮೆಟ್ರೋಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.