ಮಂಗಳೂರು: ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಮಹಿಳೆಯರಿಗೆ ದೇವರ ದರ್ಶನ ಪಡೆಯೋ ಭಾಗ್ಯ ಸಿಕ್ಕಿದಂತಾಗಿದೆ. ಉಚಿತ ಪ್ರಯಾಣ ಜಾರಿಗೆ ಬಂದ ಮೊದಲ ವೀಕೆಂಡ್ ಆದ ಶನಿವಾರ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಮಹಿಳೆಯರ ದಂಡೇ ಹರಿದು ಬಂದಿದೆ. ಸರ್ಕಾರಿ ಬಸ್ ಫುಲ್ ರಶ್ ಆಗುತ್ತಿದ್ದು, ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಮಹಿಳೆಯರೇ ತುಂಬಿಕೊಂಡಿದ್ದಾರೆ.
Advertisement
ಕಳೆದ ಭಾನುವಾರ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಯೋಜನೆ ಜಾರಿಗೆ ಬಂದಿತ್ತು. ಅದರ ನಂತರದ ವೀಕೆಂಡ್ ಇಂದು ಆಗಿರೋ ಕಾರಣ ಉಚಿತ ಬಸ್ ನಲ್ಲಿ ವೀಕೆಂಡ್ ರಜೆಯೊಂದಿಗೆ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಮಹಿಳೆಯರು ಬಂದಿದ್ದಾರೆ. ಉತ್ತರ ಕರ್ನಾಟಕದಿಂದ ಗುಳೇ ಹೊರಟಂತೆ ಎಲ್ಲಾ ಮಹಿಳೆಯರು ಮಕ್ಕಳು ಮರಿಗಳ ಜೊತೆ ತೀರ್ಥಕ್ಷೇತ್ರ ದರ್ಶನ ಮಾಡ್ತಾ ಇದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಜನರೆಲ್ಲ ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಗಳಲ್ಲಿ ಭಾರೀ ಭಕ್ತರ ಸಂಖ್ಯೆ ಏರ್ಪಟ್ಟಿದ್ದು ಜನಸಾಗರವೇ ಹರಿದು ಬರುತ್ತಿದೆ. ಮಹಿಳೆಯರು ಗುಂಪು ಗುಂಪಾಗಿ ಬಂದು ಸೇರುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್‍ಗಳೆಲ್ಲ ಫುಲ್ ರಶ್ ಆಗಿದೆ.
Advertisement
Advertisement
ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಯಾದ ದಿನದಿಂದಲೇ ಹಳ್ಳಿಗಾಡಿನ ಜನರು ಸರ್ಕಾರಿ ಬಸ್ ಹತ್ತತೊಡಗಿದ್ದಾರೆ. ಹಬ್ಬಳ್ಳಿ, ಧಾರವಾಡ, ಗದಗ, ಚಿತ್ರದುರ್ಗ, ಬೀದರ್, ಬಿಜಾಪುರ ಹಾಗೂ ಬಾಗಲಕೋಟೆ ಸೇರಿದಂತೆ ಬೆಂಗಳೂರು, ಕೋಲಾರ ಹಾಗೂ ತುಮಕೂರುನ ಮಹಿಳೆಯರು ಕರಾವಳಿಯ ತೀರ್ಥಕ್ಷೇತ್ರಕ್ಕೆ ಬಂದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಬರುತ್ತಿದ್ದು ದೇವಸ್ಥಾನ ಪರಿಸರದಲ್ಲಿ ಮಹಿಳಾ ಮಣಿಯರ ದಂಡೇ ಸೇರುತ್ತಿದೆ. ಬಸ್ ಫ್ರೀ ಆಗಿದ್ದರಿಂದ ಒಂದು ಬಾರಿಯೂ ಈ ದೇವಸ್ಥಾನಗಳನ್ನು ನೋಡದವರು ದೇವರ ದರ್ಶನ ಪಡೆದು ಸರ್ಕಾರ ದೇವರನ್ನು ನೋಡುವ ಭಾಗ್ಯ ಕರುಣಿಸಿದೆ ಎಂದಿದ್ದಾರೆ.
Advertisement
ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ಸುಗಳಲ್ಲೂ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. ದೂರದ ಜಿಲ್ಲೆಗಳಿಂದ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಬರುವುದಕ್ಕೆ ಸಾಮಾನ್ಯವಾಗಿ ಸಾವಿರಾರು ರೂಪಾಯಿ ಬೇಕಿದ್ದರೆ, ಈಗ ಉಚಿತ ಪ್ರಯಾಣ ಯೋಜನೆಯಿಂದ ಹಳ್ಳಿ ಮಹಿಳೆಯರು ಮಕ್ಕಳು, ಇಡೀ ಕುಟುಂಬವನ್ನು ಕಟ್ಟಿಕೊಂಡು ದೇವರ ದರ್ಶನಕ್ಕೆ ಬಂದಿದ್ದಾರೆ. ಇಂತಹ ಯೋಜನೆ ಕೊಟ್ಟ ಸರ್ಕಾರಕ್ಕೆ ಮಹಿಳೆಯರು ಜೈ ಎಂದಿದ್ದಾರೆ. ಇದನ್ನೂ ಓದಿ: ಅಕ್ಕಿ ಮಾರಾಟಕ್ಕೆ ಕೇಂದ್ರ ನಿರ್ಬಂಧ ಹೇರಿರುವ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟೀಕರಣ
ಮಾಮೂಲಿಯಾಗಿ ಜೂನ್ ತಿಂಗಳಲ್ಲಿ ಕರಾವಳಿಯ ತೀರ್ಥ ಕ್ಷೇತ್ರಗಳಲ್ಲಿ ಹೆಚ್ಚಿನ ಭಕ್ತರು ಇರೋದಿಲ್ಲ. ಆದರೆ ಈ ಬಾರಿ ಜೂನ್ ತಿಂಗಳಲ್ಲೇ ಫ್ರೀ ಬಸ್ ಯೋಜನೆ ಜಾರಿಯಾಗಿರೋದ್ರಿಂದ ಎಲ್ಲಾ ದೇವಸ್ಥಾನಗಳಲ್ಲೂ ಫುಲ್ ರಶ್ ಆಗಿದೆ. ಜನರ ದಟ್ಟಣೆಯಿಂದಾಗಿ ಕರಾವಳಿಯ ದೇವಸ್ಥಾನಗಳಲ್ಲಿ ಮಹಿಳೆಯರೇ ತುಂಬಿಕೊಂಡಿದ್ದಾರೆ. ಪ್ರವಾಸಿ ತಾಣ, ದೇವಸ್ಥಾನ ಪರಿಸರದಲ್ಲಿ ವ್ಯಾಪಾರವೂ ಜೋರಾಗಿದೆ. ಒಟ್ಟಿನಲ್ಲಿ ಉಚಿತ ಬಸ್ ಯೋಜನೆ ಎಲ್ಲರಿಗೂ ಸಹಕಾರಿಯಾದಂತಿದೆ.