ಬೆಂಗಳೂರು: ಕೆಎಸ್‌ಆರ್‌ಟಿಸಿ ಕಾರ್ಮಿಕರಿಂದ ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ, ಕಾರ್ಮಿಕರಿಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಸರ್ಕಾರ ಉಚಿತ ಬಸ್ ಪ್ರಯಾಣವನ್ನು ಎರಡು ದಿನ ವಿಸ್ತರಣೆ ಮಾಡಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರು, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಭಾನುವಾರದಿಂದ ಮಂಗಳವಾರದವರೆಗೆ ಉಚಿತವಾಗಿ ತೆರಳಲು ಮೂರು ದಿನಗಳ ಕಾಲ ಅವಕಾಶ ಕೊಡಲಾಗಿತ್ತು. ಈಗ ಮತ್ತೆ ಎರಡು ದಿನ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಗುರುವಾರದವರೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಾರ್ಮಿಕರು ಉಚಿತವಾಗಿ ಸಂಚಾರ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
Advertisement
Advertisement
ಪತ್ರಿಕಾ ಪ್ರಕಟಣೆ:
ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ. ಮಂಗಳವಾರ ಈ ಸೌಲಭ್ಯ ಕೊನೆಗೊಳ್ಳುತ್ತಿತ್ತು. ಆದರೆ ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಭಾನುವಾರ 951 ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ 30,000 ಜನ ಪ್ರಯಾಣ ಮಾಡಿದ್ದಾರೆ. ಇಂದು 50 ಬಸ್ಸುಗಳಲ್ಲಿ ಈಗಾಗಲೇ 1,500 ಜನರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ಸುಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್ಸುಗಳನ್ನು ಈ ಸೌಲಭ್ಯಗೋಸ್ಕರ ಕಾಯ್ದಿರಿಸಲಾಗಿದೆ. ಶನಿವಾರ 550 ಬಸ್ಸುಗಳಲ್ಲಿ 16,500 ಪ್ರಯಾಣಿಕರು ತೆರಳಿದ್ದರು.
Advertisement
ಭಾನುವಾರ ಎರಡು ರೈಲುಗಳು ಬಿಹಾರದ ಪಾಟ್ನಾ ಮತ್ತು ರಾಂಚಿಗೆ ತೆರಳಿವೆ. ಇದೇ ಸಮಯದಲ್ಲಿ ಒಡಿಸ್ಸಾದ ಭುವನೇಶ್ವರಕ್ಕೆ ಒಂದು ರೈಲು ಕಳುಹಿಸಲಾಗಿದೆ. ಒಟ್ಟು ನಾಲ್ಕು ರೈಲುಗಳಲ್ಲಿ 4,800 ಪ್ರಯಾಣಿಕರು ಆ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಇಂದು ರಾಜಸ್ಥಾನದ ಜೈಪುರ, ಬಿಹಾರದ ಪಾಟ್ನಾಗೆ ಎರಡು ರೈಲುಗಳು ಹೊರಡಲಿವೆ. ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.