ನಟ ನಟಿಯರ ಹಾಗೂ ಅವರ ಸಂಸ್ಥೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ದೋಚುವ ಪ್ರಕರಣಗಳು ಒಂದರ ಮೇಲೊಂದು ನಡೆಯುತ್ತಲೇ ಇದೆ. ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಇಂಥದ್ದೊಂದು ದೋಖಾ ನಡೆದಿತ್ತು. ಅದಕ್ಕೆ ಸಲ್ಮಾನ್ (Salman Khan) ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ವಿದ್ಯಾ ಬಾಲನ್ (Vidya Balan) ಹೆಸರಿನಲ್ಲೂ ಇಂಥದ್ದೊಂದು ಕೃತ್ಯ ನಡೆದಿದೆ.
ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ನಟಿಯ ಹೆಸರಿನಲ್ಲಿ ಹಣ ಮಾಡುತ್ತಿದ್ದಾರಂತೆ. ಈ ವಿಷಯ ಅವರಿಗೆ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ವಿದ್ಯಾ ಬಾಲನ್. ಇಂತಹ ಕೃತ್ಯ ಮಾಡುತ್ತಿರುವವರನ್ನು ಬಂಧಿಸಿ, ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.
ತಮ್ಮ ಹೆಸರನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಕಿಡಿಗೇಡಿಗಳು ಇದೇ ಕೆಲಸ ಮಾಡಿದ್ದರು. ಆಡಿಷನ್ ಹಾಗೂ ಸಿನಿಮಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡಿದ್ದರು. ಆಗಲೂ ದೂರು ದಾಖಲಾಗಿತ್ತು.