ಮುಂಬೈ: ಬಿಸಿಸಿಐನಿಂದ ಅಮಾನತಿನಲ್ಲಿರುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರ ಮೇಲಿನ ಆರೋಪದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಐಪಿಎಲ್ ಫ್ರಾಂಚೈಸಿಗಳು ಆಗ್ರಹಿಸಿವೆ.
ಮಹಿಳೆಯರ ಕುರಿತು ಅಸಭ್ಯ ಹೇಳಿಕೆಗಳನ್ನು ನೀಡಿ ಆಸೀಸ್ ಏಕದಿನ ಟೂರ್ನಿಯಿಂದ ಹೊರಬಿದ್ದಿದ್ದ ಇಬ್ಬರು ಆಟಗಾರರು ಮುಂದಿನ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಸ್ಥಾನ ಪಡೆಯುವುದು ಅನುಮಾನ. ಹೀಗಾಗಿ ಮಾರ್ಚ್ ನಿಂದ ಆರಂಭವಾಗಲಿರುವ ಐಪಿಎಲ್ ಆವೃತ್ತಿಯ ಒಳಗೆ, ಇಬ್ಬರ ಮೇಲಿನ ವಿಚಾರಣೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಫ್ರಾಂಚೈಸಿಗಳು ಬಿಸಿಸಿಐ ಅನ್ನು ಒತ್ತಾಯಿಸಿವೆ.
ಪಾಂಡ್ಯ ಹಾಗೂ ಕೆಎಲ್ ರಾಹುಲ್ ಮುಂಬೈ ಮತ್ತು ಪಂಜಾಬ್ ತಂಡಗಳ ಪ್ರಮುಖ ಆಟಗಾರರಾಗಿದ್ದು, ಒಂದೊಮ್ಮೆ ಕ್ರಮ ಕೈಗೊಳ್ಳುವುದಾದರೆ ಫೆಬ್ರವರಿ 2ನೇ ವಾರದ ಒಳಗೆ ತೀರ್ಮಾನ ಕೈಗೊಂಡರೆ ಉತ್ತಮ ಎಂದು ಫ್ರಾಂಚೈಸಿಯ ಹಿರಿಯ ವ್ಯಕ್ತಿಯೊಬ್ಬರು ಬಿಸಿಸಿಐಗೆ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಈಗಾಗಲೇ ಆಟಗಾರರ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಟೂರ್ನಿಯ ಈ ಸಮಯದಲ್ಲಿ ಆಟಗಾರರನ್ನು ಹೊರ ಹಾಕಲು ಕಷ್ಟಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಈ ಕುರಿತು ತಂಡದಲ್ಲಿ ಚರ್ಚೆ ನಡೆಸಿದ್ದು, ಯಾವುದೇ ಭಾವನಾತ್ಮಕ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಟಗಾರರ ಮೇಲೆ ಕ್ರಮ ಕೈಗೊಳ್ಳಲು ನಿಷೇಧದ ಹೊರತಾಗಿಯೂ ಅವಕಾಶವಿದ್ದು, ಬಿಸಿಸಿಐ ಆಟಗಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಲ್ಲಿ ಹಿಂಬಡ್ತಿ ನೀಡಬಹುದು ಎಂದು ಸಲಹೆಯನ್ನು ನೀಡಿದ್ದಾರೆ. ಅಲ್ಲದೇ ಬಿಸಿಸಿಐ ಆಟಗಾರರ ಮೇಲಿನ ತೀರ್ಮಾನವನ್ನು ತ್ವರಿತವಾಗಿ ಕೈಗೊಳ್ಳಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv