ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ಸಿನ 14 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆದೇಶ ನೀಡಿದ್ದಾರೆ. ಸ್ಪೀಕರ್ ಆದೇಶಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಪ್ರಶ್ನೆ 1:
ಶಾಸಕರು ಎರಡನೇ ಬಾರಿಗೆ ರಾಜೀನಾಮೆ ನೀಡಿರುವ ದಿನವನ್ನು ಸ್ಪೀಕರ್ ಅನರ್ಹತೆ ಪ್ರಕರಣಕ್ಕೆ ಪರಿಗಣಿಸಿದ್ದಾರೆ. ಜುಲೈ 6ರಂದು ಸ್ಪೀಕರ್ ಕಚೇರಿಗೆ ತೆರಳಿ ರಮೇಶ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಶಾಸಕರು ರಾಜೀನಾಮೆ ನೀಡಿದ್ದರು. ಶಾಸಕರ ರಾಜೀನಾಮೆ ನಿಯಮ 202ರ ಅನ್ವಯ ಇಲ್ಲ. ಹಾಗಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಬೇಕು ಎಂದು ಸೂಚಿಸಿದ್ದರು. ಈ ನಡುವೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಶಾಸಕರು ನ್ಯಾಯಾಲಯದ ಸೂಚನೆ ಮೇರೆಗೆ ಜುಲೈ 9ರಂದು ಪುನಃ ಕ್ರಮಬದ್ಧವಾಗಿ ರಾಜೀನಾಮೆ ನೀಡಿದ್ದರು. ಎರಡನೇ ಬಾರಿಗೆ ಸಲ್ಲಿಸಿರುವ ದಿನವನ್ನು ಸ್ಪೀಕರ್ ಪರಿಗಣನೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘಿಸಿದ್ದಾರೆಂದು ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ರಾಜೀನಾಮೆ ಸಲ್ಲಿಸಿದ ದಿನವನ್ನೇ ಸ್ಪೀಕರ್ ಗಣನೆಗೆ ತೆಗೆದುಕೊಂಡಿದ್ದರೆ ವಿಪ್ ಉಲ್ಲಂಘನೆ ಆಗುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಜುಲೈ 6ರಂದು ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕ ವಿಪ್ ಜಾರಿ ಮಾಡಿದ್ದರು. ಹೀಗಾಗಿ ವಿಪ್ ಉಲ್ಲಂಘನೆ ಆಗುತ್ತಾ? ಇಲ್ಲವೋ ಎನ್ನುವ ಪ್ರಶ್ನೆ ಎದ್ದಿದೆ.
ಪ್ರಶ್ನೆ 2:
ವಿಶ್ವಾಸಮತ ಸಾಬೀತು ದಿನ ಶಾಸಕರಾದ ನಾಗೇಂದ್ರ ಮತ್ತು ಶ್ರೀಮಂತ್ ಪಾಟೀಲ್ ಅನಾರೋಗ್ಯ ಹಿನ್ನೆಲೆಯಲ್ಲಿ ಸದನಕ್ಕೆ ಗೈರಾಗಿದ್ದರು. ಕಲಾಪದಲ್ಲಿ ಸ್ಪೀಕರ್ ಮುಂದೆ ಶ್ರೀಮಂತ್ ಪಾಟೀಲ್ ಬರೆದ ಪತ್ರವನ್ನು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸಲ್ಲಿಸಿದ್ದರು. ಆದ್ರೆ ಸ್ಪೀಕರ್ ರಮೇಶ್ ಕುಮಾರ್ ಪತ್ರ ಕ್ರಮಬದ್ಧವಾಗಿಲ್ಲ. ಯಾವುದೇ ಲೆಟರ್ ಹೆಡ್‍ನಲ್ಲಿ ಇಲ್ಲ ಮತ್ತು ಪತ್ರದಲ್ಲಿ ದಿನಾಂಕ ಸಹ ನಮೂದಿಸಿಲ್ಲ ಎಂದು ಹೇಳಿ ಪತ್ರವನ್ನು ತಿರಸ್ಕರಿಸಿದ್ದರು. ಶಾಸಕ ನಾಗೇಂದ್ರ ಆರೋಗ್ಯದ ಕಾರಣ ಹೇಳಿ ಸದನಕ್ಕೆ ಗೈರಾಗಿದ್ದರು. ವಿಪ್ ಅನ್ವಯವಾದರೆ ನಾಗೇಂದ್ರ ಅವರಿಗೂ ಸಹ ಅನ್ವಯವಾಗುತ್ತದೆ. ಆದರೆ ನಾಗೇಂದ್ರ ಅವರನ್ನು ಅನರ್ಹಗೊಳಿಸದೇ ಕೇವಲ ಶ್ರೀಮಂತ್ ಪಾಟೀಲ್ ರನ್ನು ಅನರ್ಹಗೊಳಿಸಿದ್ದು ಯಾಕೆ ಎನ್ನುವ ಎರಡನೇ ಪ್ರಶ್ನೆ ಎದ್ದಿದೆ.
ಪ್ರಶ್ನೆ 3:
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಫೆಬ್ರವರಿಯಲ್ಲಿ ವಿಪ್ ಉಲ್ಲಂಘನೆ ಮಾಡಿದ್ದಾರೆಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರು ಸಲ್ಲಿಸಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಜುಲೈ 25ರಂದು ಆರ್.ಶಂಕರ್ ಸೇರಿದಂತೆ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರನ್ನು ಅನರ್ಹಗೊಳಿಸಿದ್ದರು. ಈಗ ವಿಪ್ ಜಾರಿಯಾಗುವುದು ಕಲಾಪಕ್ಕೋ ಅಥವಾ ಸದನದ ಹೊರಗಡೆಯೇ ಎನ್ನುವ ಪ್ರಶ್ನೆ ಎದ್ದಿದೆ.
ಪ್ರಶ್ನೆ 4:
ರಾಜೀನಾಮೆ ನೀಡಿದ ಶಾಸಕರ ಅರ್ಜಿಯನ್ನು ಪರಿಶೀಲಿಸಲು ಸ್ಪೀಕರ್ ಮೂರು ದಿನ ಸಮಯ ತೆಗೆದುಕೊಂಡಿದ್ದರು. ಅಂದು ಶನಿವಾರ ಮತ್ತು ಭಾನುವಾರ ರಜೆ ದಿನವಾಗಿದ್ದರಿಂದ ಕಚೇರಿ ಬಂದ್ ಆಗಿತ್ತು. ಸೋಮವಾರ ವೈಯಕ್ತಿಕ ಕೆಲಸಗಳ ನಿಮಿತ್ತ ಕಚೇರಿಗೆ ಬಂದಿರಲಿಲ್ಲ. ಹಾಗಾಗಿ ಮಂಗಳವಾರ ಕಚೇರಿಗೆ ಬಂದು ರಾಜೀನಾಮೆ ಅರ್ಜಿ ಪರಿಶೀಲಿಸಿದೆ ಎಂದು ಹೇಳಿದ್ದರು. ಇದೀಗ ಅನರ್ಹಗೊಳಿಸುವ ಮುನ್ನ ಮಾತನಾಡಿದ್ದ ಸ್ಪೀಕರ್ ರಮೇಶ್ ಕುಮಾರ್, ರಜೆ ದಿನವಾಗಿದ್ದರೂ ಶನಿವಾರ ಮತ್ತು ಭಾನುವಾರ ಕೆಲಸ ಮಾಡಿದ್ದೇವೆ ಎಂದಿದ್ದರು. ಈಗ ರಾಜೀನಾಮೆ ಸ್ವೀಕರಿಸುವ ವಿಚಾರದ ಬಂದಾಗ ಭಾನುವಾರ ಅಡ್ಡಿಯಾಗುತ್ತದೆ. ಅನರ್ಹತೆ ನಿರ್ಧಾರ ಪ್ರಕಟಿಸುವಾಗ ಭಾನುವಾರ ಯಾಕೆ ಅಡ್ಡಿಯಾಗುವುದಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
ಸ್ಪೀಕರ್ ನಮ್ಮ ರಾಜೀನಾಮೆಯನ್ನು ಅಂಗೀಕರಿಸದೇ ತಡ ಮಾಡುತ್ತಿದ್ದಾರೆ ಎಂದು ಈಗಾಗಲೇ ಅತೃಪ್ತ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸುಪ್ರೀಂ ಈಗಾಗಲೇ ಮಧ್ಯಂತರ ಆದೇಶ ಪ್ರಕಟಿಸಿದೆ. ಈಗ ಅನರ್ಹತೆ ಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಮೊರೆ ಹೋಗಲಿದ್ದಾರೆ.
17 ಶಾಸಕರು ಅನರ್ಹ:
ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಎಲ್ಲ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ.