ಲಕ್ನೋ: ತಂದೆಯ ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಮಕ್ಕಳೇ ಐದು ತಿಂಗಳ ಕಾಲ ಬಚ್ಚಿಟ್ಟಿದ್ದ ಅಮಾನವೀಯ ಕೃತ್ಯವೊಂದು ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಾರಣಾಸಿಯ ಕಬೀರ್ ನಗರದ ಅಮರಾವತಿ ದೇವಿ (70) ಮೃತಪಟ್ಟಿದ್ದರು. ತಾಯಿಯೇ ಮೃತಪಟ್ಟರೂ ನಾಲ್ವರು ಪುತ್ರರು ಹಾಗೂ ಅವರ ಪತ್ನಿಯರು ಪಿಂಚಣಿ ಹಣ ಪಡೆಯುವುದಕ್ಕಾಗಿ ಈ ಕೃತ್ಯ ಎಸಗಿದ್ದಾರೆ.
Advertisement
ವ್ಯಕ್ತಿಯೊಬ್ಬರು 100 ನಂಬರ್ ಗೆ ಕರೆ ಮಾಡಿ, ಅಮರಾವತಿ ದೇವಿ ಅವರು ಇದೇ ವರ್ಷ ಜನವರಿ 12ರಂದು ಸಾವನ್ನಪ್ಪಿದ್ದಾರೆ. ಆದರೆ, ಮನೆಯವರು ನೆರೆಹೊರೆಯವರಿಗೆ ಅನುಮಾನ ಬಾರದಂತೆ ಮೃತ ದೇಹವನ್ನು ಬಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದರು. ನಂತರ ತನಿಖೆ ಕೈಗೊಂಡಿದ್ದರಿಂದ ಪ್ರಕರಣದ ಬೆಳಕಿಗೆ ಬಂದಿದೆ ಎಂದು ಭುಲ್ಪುರ್ ಸಂಚಾರ ಪೊಲೀಸ್ ಅಧಿಕಾರಿ ಎ.ಪಿ.ಸಿಂಗ್ ತಿಳಿಸಿದ್ದಾರೆ.
Advertisement
ಮೃತರ ಪತಿ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರಿಂದ ಅಮರಾವತಿ ಅವರಿಗೆ ಪ್ರತಿ ತಿಂಗಳು 13,000 ಪಿಂಚಣಿ ಬರುತ್ತಿತ್ತು. ಇದನ್ನು ಪಡೆಯಲು ಅವರ ನಾಲ್ಕು ಜನ ಪುತ್ರರು ಮೃತ ದೇಹವನ್ನು ಇಟ್ಟುಕೊಂಡು, ಐದು ಖಾಲಿ ಚೆಕ್‍ಗಳಿಗೆ ಸಹಿ ಮಾಡಿಸಿಕೊಂಡಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
Advertisement
ನಡೆದಿದ್ದು ಏನು:
ಅಮರಾವತಿಯವರಿಗೆ ಐದು ಜನ ಪುತ್ರರು, ಓರ್ವ ಪುತ್ರಿ ಇದ್ದು, ನಾಲ್ವರು ಪುತ್ರರ ಜೊತೆ ವಾಸವಾಗಿದ್ದರು. ಕೊನೆಯ ಮಗ ಜ್ಯೋತಿ ಪ್ರಕಾಶ್ ಪ್ರತ್ಯೇಕ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ.
Advertisement
ಈ ವರ್ಷ ಜನವರಿಯಲ್ಲಿ ಅಮರಾವತಿ ಅವರು ಅನಾರೋಗ್ಯ ಒಳಗಾಗಿದ್ದರು. ಹೀಗಾಗಿ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸುಂದರ್ಲಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಅಮರಾವತಿ ಅವರ ಆರೋಗ್ಯ ಸ್ವಲ್ಪ ಸುಧಾರಣೆ ಆಗುತ್ತಿದ್ದಂತೆ ಮಕ್ಕಳು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಮೃತಪಟ್ಟಿದ್ದಾರೆ. ಮೃತಪಡುವ ಮೊದಲೇ 5 ಖಾಲಿ ಚೆಕ್‍ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ದೇಹ ಕೊಳೆಯದಂತೆ ರಾಸಾಯನಿಕವನ್ನು ಸಿಂಪಡಿಸಿದ್ದಾರೆ. ಅಲ್ಲದೇ ನೆರೆಹೊರೆಯವರಿಗೆ ವಾಸನೆ ಬಾರದಂತೆ ಮನೆಯಲ್ಲಿ ಲೋಬಾನ ಹಾಕುತ್ತಿದ್ದರು. ಆರೋಪಿಗಳಿಗೆ ಅವರ ಪತ್ನಿಯರು ಸಾಥ್ ನೀಡಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ನಿಗದಿತ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.