ಬೆಂಗಳೂರು: ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಶಂಕರ್ ಅಲಿಯಾಸ್ ಗಾಂಧಿ, ಸುರಬ್ ಪಾಷಾ, ಚೋಟು ಹಾಗೂ ರಾಜೇಶ್ ಕುಮಾರ್ ಬಂಧಿತ ಅರೋಪಿಗಳು. 2017 ರ ಆಗಸ್ಟ್ ರಂದು ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಯುವತಿಯನ್ನು ಹುಡುಕಿಕೊಂಡು ಹೊರಟ ಪೊಲೀಸರಿಗೆ ಈ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ.
ಮಾರತ್ತಹಳ್ಳಿಯಿಂದ ಪ್ರಿಯಕರನನ್ನ ಹುಡುಕಿ ಹೊರಟಿದ್ದ ಯುವತಿ ಕೋಲಾರಕ್ಕೆ ತೆರಳಿದ್ದಳು. ಈ ಕುರಿತು ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯ ಮೊಬೈಲ್ ಟವರ್ ಲೊಕೇಶನ್ ನಿಂದ ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ.
ದೆಹಲಿಯ ಅಜ್ಮೀರ್ ಗೇಟ್ ಬಳಿ ಕಾಜಲ್ ಎಂಬಾಕೆಗೆ ಯುವತಿಯನ್ನ ಆರೋಪಿಗಳು 70 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಶಿವಶಂಕರ್ ಯುವತಿಗೆ ನಿದ್ದೆ ಮಾತ್ರೆಗಳನ್ನ ನೀಡಿ ವೇಶ್ಯಾವಾಟಿಕೆಗೆ ತಳ್ಳಿದ್ದನು. ಪ್ರಕರಣದ ವಿಚಾರಣೆ ವೇಳೆ ಆರೋಪಿ ಶಿವಶಂಕರ್ ನೂರಾರು ಯುವತಿಯರನ್ನ ನಂಬಿಸಿ ಕರೆದೊಯ್ದು ವೇಶ್ಯಾವಾಟಿಕೆಗೆ ದೂಡಿದ್ದರ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಸದ್ಯ ನಾಲ್ವರು ಆರೋಪಿಗಳನ್ನ ಸೆರೆ ಹಿಡಿದಿರುವ ಪೊಲೀಸರು ಇದೀಗ ದಲ್ಲಾಳಿ ಕಾಜಲ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.