ದಾವಣಗೆರೆ: ಚಿನ್ನದ (Gold) ವ್ಯಾಪಾರಿ ಬಳಿ ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ದಾವಣಗೆರೆಯ (Davanagere) ಕೆಟಿಜೆ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಪಿಎಸ್‍ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪಿಎಸ್‍ಐಗಳಿಗೆ ವ್ಯಾಪಾರಿ ಬಳಿ ಚಿನ್ನ ಇರುವುದರ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ. ಇಬ್ಪಿಬರು ಎಸ್‌ಐಗಳು ವರ್ಗಾವಣೆ ಆಗಿ ಐಜಿ ಅಫೀಸ್‌ನಲ್ಲಿ ರಿಪೋರ್ಟ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಪತ್ನಿ ಮೇಲೆ GBA ಮಾರ್ಷಲ್ ದರ್ಪ ಆರೋಪ – ಮಹಿಳೆ ನೇಣಿಗೆ ಶರಣು
ಕಾರವಾರ (Karwar) ಮೂಲದ ವ್ಯಾಪಾರಿ ವಿಶ್ವನಾಥ್ ಅರ್ಕಸಾಲಿ ಎಂಬವರು 80 ಗ್ರಾಂ ಬಂಗಾರದ ಒಡವೆಗಳನ್ನು ತೆಗೆದುಕೊಂಡು ದಾವಣಗೆರೆಯ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಸೇರಿ ವ್ಯಾಪಾರಿಗೆ ನಾವು ಐಜಿ ಸ್ಕ್ವಾಡ್ ಎಂದು ಹೇಳಿ ಹೆದರಿಸಿದ್ದರು. ಪೊಲೀಸ್ ಐಡಿ ಕಾರ್ಡ್, ನಕಲಿ ಗನ್ ತೋರಿಸಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕಾರಿನಲ್ಲಿ ಕರೆದೊಯ್ದು, ಒಳಗೆ ಹೋಗದೆ ವಾಪಸ್ ಕರೆತಂದಿದ್ದರು. ಬಳಿಕ ವ್ಯಾಪಾರಿಯ ಬಳಿ ಇದ್ದ ಬಂಗಾರವನ್ನು ಕಸಿದುಕೊಂಡು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು.
ಬಂಗಾರ ಕಳೆದುಕೊಂಡ ವ್ಯಾಪಾರಿ ಕೆಟೆಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಕೆಟಿಜೆ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್ – ಮತ್ತಿಬ್ಬರು ಅರೆಸ್ಟ್, ಪ್ರಕರಣದ ಎಲ್ಲಾ ಆರೋಪಿಗಳು ಲಾಕ್

