ನವದೆಹಲಿ: ಕೆಂಪುಕೋಟೆ ಬಳಿ ನಡೆದ ಸ್ಫೋಟ (Delhi Blast) ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಮೂವರು ವೈದ್ಯರು ಸೇರಿದಂತೆ ನಾಲ್ವರನ್ನು NIA ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಪ್ರಕರಣದಲ್ಲಿ ಈ ನಾಲ್ವರ ಪಾತ್ರ ಇಲ್ಲ ಎಂದು ಎನ್‌ಐಎ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಿಡುಗಡೆಯಾದವರನ್ನು ಡಾ.ರೆಹಾನ್, ಡಾ.ಮೊಹಮ್ಮದ್, ಡಾ.ಮುಸ್ತಕೀಮ್ ಮತ್ತು ರಸಗೊಬ್ಬರ ವ್ಯಾಪಾರಿ ದಿನೇಶ್ ಸಿಂಗ್ಲಾ ಎಂದು ಗುರುತಿಸಲಾಗಿದೆ. ಸಿಂಗ್ಲಾ ಇವರನ್ನು ಹರಿಯಾಣದ ನುಹ್‌ನಲ್ಲಿ ಬಂಧಿಸಲಾಗಿತ್ತು. ಸ್ಫೋಟದ ರುವಾರಿ ಉಮರ್ ಜೊತೆ ಸಂಪರ್ಕ ಹೊಂದಿದ್ದರು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದರು ಎಂಬ ಶಂಕೆಯ ಮೇಲೆ ಇವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಈ ನಾಲ್ವರನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಇದನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ ಕೇಸ್- ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಅರೆಸ್ಟ್
ವಿಚಾರಣೆ ಬಳಿಕ ಕೆಂಪು ಕೋಟೆ ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳು ಸಿಗದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ. ಕುಟುಂಬಗಳು ಅವರ ಬಿಡುಗಡೆಯನ್ನು ದೃಢಪಡಿಸಿವೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಆದಾಗ್ಯೂ, NIA ಅವರ ಮೇಲೆ ನಿಗಾ ಇಡಲಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 10 ರಂದು ದೆಹಲಿ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರು ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದರು. ಸ್ಫೋಟಕ್ಕೆ ಸಂಬಂಧಿಸಿದಂತೆ ಮೇವಾತ್‌ನ ಏಳು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ. ಅದರಲ್ಲಿ ನಾಲ್ವರನ್ನು ಈಗ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ‘ವೈಟ್-ಕಾಲರ್’ ಉಗ್ರರೊಂದಿಗೆ ಸಂಪರ್ಕ – ಹರಿಯಾಣ ಮೂಲದ ಸರ್ಕಾರಿ ವೈದ್ಯೆ ಕಾಶ್ಮೀರದಲ್ಲಿ ಅರೆಸ್ಟ್

