ನವದೆಹಲಿ: ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಅಂತಾ ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ.
NEET ಪೇಪರ್ ಸೋರಿಕೆ ಮತ್ತು UGC-NET ಬಗ್ಗೆ ಇಡೀ ದೇಶದಲ್ಲಿ ಕೋಲಾಹಲವಿದೆ. ದೇಶದ ಹಲವೆಡೆ ವಿದ್ಯಾರ್ಥಿಗಳ ಪ್ರತಿಭಟನೆಯೂ ಮುಂದುವರಿದಿವೆ. ಈ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪಾರದರ್ಶಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ನೀಟ್‌ನಲ್ಲಿನ ಅಕ್ರಮಗಳು ಮತ್ತು UGC- NET ಪರೀಕ್ಷೆ ರದ್ದತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಇಡುವಂತೆ ನಾನು ನನ್ನ ವಿರೋಧ ಪಕ್ಷದ ಸ್ನೇಹಿತರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಪಾರದರ್ಶಕತೆಗಾಗಿ ಪರೀಕ್ಷೆ ನಡೆಸಲು ಮತ್ತು ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಸುಧಾರಿಸಲು ನಮ್ಮ ಸರ್ಕಾರ 100% ಬದ್ಧವಾಗಿದೆ. ಈ ಬಗ್ಗೆ ನಾನು ನಿಮಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ನಮ್ಮ ಸರ್ಕಾರವು ಯಾವುದೇ ಅವ್ಯವಹಾರ, ಯಾವುದೇ ಅಕ್ರಮಗಳನ್ನು ಸಹಿಸುವುದಿಲ್ಲ ಎಂದರು. ಇದನ್ನೂ ಓದಿ: ನೀಟ್ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ
ನಾವು ಬಿಹಾರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಪಾಟ್ನಾದಿಂದ ಕೆಲವು ಮಾಹಿತಿಯನ್ನು ಪಡೆಯುತ್ತಿದ್ದೇವೆ. ಪಾಟ್ನಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ವಿವರವಾದ ವರದಿಯನ್ನು ಅವರಿಂದ ಸಲ್ಲಿಸಲಾಗುವುದು. ಮಾಹಿತಿಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಾರ್ಕ್ ನೆಟ್‌ನಲ್ಲಿರುವ UGC-NET ಪ್ರಶ್ನೆಪತ್ರಿಕೆಯು UGC-NET ನ ಮೂಲ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗುತ್ತಿದೆ. ಇದು ಸ್ಪಷ್ಟವಾದ ನಂತರ ನಾವು ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಕೆಲವು ಅಕ್ರಮಗಳು ಸರ್ಕಾರದ ಗಮನಕ್ಕೆ ಬಂದಿವೆ. ಅದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ವದಂತಿಗಳನ್ನು ನಂಬಬೇಡಿ ಎಂದು ನಾನು ವಿದ್ಯಾರ್ಥಿಗಳಲ್ಲಿ ಅತ್ಯಂತ ವಿನಂತಿಸುತ್ತೇನೆ. ಪೇಪರ್ ಸೋರಿಕೆಯು ಎನ್‌ಟಿಎಯ ಸಾಂಸ್ಥಿಕ ವೈಫಲ್ಯವಾಗಿದೆ. ಸುಧಾರಣಾ ಸಮಿತಿ ಇರುತ್ತದೆ ಮತ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಪ್ರಧಾನ್ ಭರವಸೆ ನೀಡಿದರು.