ಕೋಲ್ಕತ್ತಾ: ಹಿರಿಯ ಎಡಪಂಥೀಯ ನಾಯಕ ಮತ್ತು ಪಶ್ಚಿಮ ಬಂಗಾಳದ (West Bengal) ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (80) ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಇಂದು ಬೆಳಗ್ಗೆ ಬುದ್ಧದೇವ್ ಭಟ್ಟಾಚಾರ್ಯ (Buddhadeb Bhattacharjee) ಅವರು ದಕ್ಷಿಣ ಕೋಲ್ಕತ್ತಾದ ನಿವಾಸದಲ್ಲಿ ನಿಧನರಾದರು.
ಕಳೆದ ವರ್ಷ ಅವರು ನ್ಯುಮೋನಿಯಾಕ್ಕೆ ತುತ್ತಾದ ನಂತರ ಅವರನ್ನು ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು. ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದರು. ಅವರು ಪತ್ನಿ ಮೀರಾ ಮತ್ತು ಪುತ್ರ ಸುಚೇತನ್ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: Paris Olympics | ವಿನೇಶ್ ಅನರ್ಹ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ – ಅಂತಿಮ್ ಪಂಘಲ್ ಗಡಿಪಾರು
ಸಿಪಿಎಂನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಪಾಲಿಟ್‌ಬ್ಯೂರೊದ ಮಾಜಿ ಸದಸ್ಯರಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ 2000 ರಿಂದ 2011 ರವರೆಗೆ ಬಂಗಾಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಜ್ಯೋತಿ ಬಸು ಅವರ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು.
2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸುವುದರೊಂದಿಗೆ 34 ವರ್ಷಗಳ ಕಮ್ಯುನಿಸ್ಟ್ ಆಳ್ವಿಕೆಯನ್ನು ಕೊನೆಗೊಳಿಸಿದ್ದರು. 2011ರ ಚುನಾವಣೆಯನ್ನು ಕಮ್ಯೂನಿಸ್ಟ್ ಪಕ್ಷ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದಲ್ಲಿ ಎದುರಿಸಿತ್ತು.