ನವದೆಹಲಿ: ದೇಶದ ಅತೀ ದೊಡ್ಡ, ಬಹು ಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.
ದೂರಸಂಪರ್ಕ ಇಲಾಖೆಯ ಮಾಜಿ ಸಚಿವ ಎ. ರಾಜಾ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಗಳು ಕನಿಮೋಳಿ ಸೇರಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
Advertisement
Advertisement
ಪ್ರಕರಣದ ಅಂತಿಮ ಹಂತದ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯ ದಲ್ಲಿ ನವೆಂಬರ್‍ನಲ್ಲಿ ಆರಂಭಗೊಂಡಿತ್ತು. ಹಗರಣಕ್ಕೆ ಸಂಬಂಧಿಸಿದ ಒಟ್ಟು ಮೂರು ಪ್ರಕರಣಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ಪೈಕಿ ಒಂದು ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಮತ್ತೆರಡು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು.
Advertisement
Advertisement
ಎ. ರಾಜಾ ಅವರು ಸೆಲ್‍ಫೋನ್ ನೆಟ್‍ವರ್ಕ್‍ಗಳಿಂದ ಕಿಕ್‍ಬ್ಯಾಕ್ ಪಡೆದು ಏರ್‍ವೇವ್ಸ್ ಹಾಗೂ ಲೈಸೆನ್ಸ್ ನೀಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು 1.76 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಸಾಕ್ಷಾಧಾರಗಳ ಕೊರತೆಯಿಂದಾಗಿ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್, ಎ. ರಾಜಾ ವಿತರಿಸಿದ್ದ ಎಲ್ಲಾ ಲೈಸೆನ್ಸ್ ಗಳನ್ನ ರದ್ದು ಮಾಡಿತ್ತು.
ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಹೊರಭಾಗದಲ್ಲಿ ಜಮಾಯಿಸಿದ್ದ 500ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಇದು ನಮ್ಮ ನೈತಿಕ ವಿಜಯ ಎಂದು ಬಣ್ಣಿಸಿದೆ.