ಕೊಪ್ಪದಲ್ಲಿ ಮಹೇಂದ್ರ ಕುಮಾರ್ ಅಂತ್ಯಕ್ರಿಯೆ

Public TV
2 Min Read
Mahendra Kumar Main

ಚಿಕ್ಕಮಗಳೂರು: ಬಜರಂಗದಳದ ಮಾಜಿ ರಾಜ್ಯ ಸಂಚಾಲಕ, ಪ್ರಗತಿಪರ ಚಿಂತಕ, ವಾಗ್ಮಿ ಮಹೇಂದ್ರ ಕುಮಾರ್ ಅವರ ಅಂತ್ಯಸಂಸ್ಕಾರವು ಅವರ ಸ್ವಗ್ರಾಮ ಕೊಪ್ಪ ತಾಲೂಕಿನ ಕೂಗುಗೊಳ್ಳಿಯಲ್ಲಿ ನೆರವೇರಿತು.

47 ವರ್ಷದ ಮಹೇಂದ್ರ ಕುಮಾರ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ದರು. ಮಹೇಂದ್ರ ಕುಮಾರ್ ಅವರಿಗೆ ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಜಿಲ್ಲೆಯ ಬಜರಂಗದಳಕ್ಕೆ ಮಹೇಂದ್ರ ಕುಮಾರ್ ಅವರೇ ಭದ್ರಬುನಾದಿ ಹಾಕಿ ಕೊಟ್ಟವರು.

Mahendra Kumar Main 1

ಮಹೇಂದ್ರ ಅವರ ಪಾರ್ಥಿವ ಶರೀರವನ್ನ ಶನಿವಾರ ಸಂಜೆ 7:30ಕ್ಕೆ ಅಂಬುಲೆನ್ಸ್ ಮೂಲಕ ಸ್ವಗ್ರಾಮ ಕೊಪ್ಪ ತಾಲೂಕಿನ ಕೂಸುಗೊಳ್ಳಿಯ ಸಹೋದರ ಸತೀಶ್ ಮನೆಗೆ ತರಲಾಯಿತು. ಸ್ನೇಹಿತರು ಕುಟುಂಬಸ್ಥರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಿತ್ತು. ಮನೆ ಸಮೀಪದ ತೋಟದಲ್ಲಿ ಅಂತಿಮ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮಹೇಂದ್ರ ಕುಮಾರ್ ಅವರ ಪಾರ್ಥಿವ ಶರೀರ ಜಿಲ್ಲೆಗೆ ಬರುತ್ತಿದ್ದಂತೆ ಪ್ರತಿ ಊರುಗಳಲ್ಲೂ ಅವರ ಅಭಿಮಾನಿಗಳು ದರ್ಶನ ಪಡೆದು ಕಂಬನಿ ಮಿಡಿದರು. ಸಚಿವ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಶೃಂಗೇರಿ ಶಾಸಕ ಟಿ.ಡಿರಾಜೇಗೌಡ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ನೂರಾರು ಜನ ಅಂತಿಮ ದರ್ಶನ ಪಡೆದರು.

Mahendra Kumar A

ವಾಕ್ ಚತುರರಾಗಿದ್ದ ಮಹೇಂದ್ರ ಕುಮಾರ್, ಕಿರಿಯ ವಯಸ್ಸಲ್ಲೇ ಅಪಾರ ಜ್ಞಾನ ಹೊಂದಿ ಹೋರಾಟದ ಹಾದಿ ತುಳಿದಿದ್ದರು. ದಕ್ಷಿಣ ಕನ್ನಡದಲ್ಲಿ ಆಳವಾಗಿ ಬೇರೂರಿದ್ದ ಬಜರಂಗದಳವನ್ನ ತಮ್ಮ ಮಾತು ಹಾಗೂ ಸಂಘಟನಾ ಚಾತುರ್ಯದಿಂದ ಜಿಲ್ಲೆಯಲ್ಲೂ ಭದ್ರಬುನಾದಿ ಹಾಕಿ ಬೆಳೆಸಿದ್ದರು. ಕೊಪ್ಪದಲ್ಲಿ ಆರಂಭಗೊಂಡ ಬಜರಂಗದಳ ಶಾಖೆ ಇಡೀ ಜಿಲ್ಲೆ ವ್ಯಾಪಿಸಿತ್ತು. ಬಜರಂಗದಳ ಸಂಚಾಲಕ, ಜಿಲ್ಲಾ ಸಂಚಾಲಕ, ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, ದತ್ತಪೀಠ ಚಲೋ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. 2008ರಲ್ಲಿ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಚರ್ಚ್ ದಾಳಿ ಹಿನ್ನೆಲೆ ಮಹೇಂದ್ರ ಕುಮಾರ್ 42 ದಿನ ಬಂಧನಕೊಳಗಾಗಿದ್ದರು.

Mahendra Kumar 1

2000ರಲ್ಲಿ ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ ಭಾಗದಲ್ಲಿ ತಲೆ ಎತ್ತುತ್ತಿದ್ದ ನಕ್ಸಲ್ ಚಳುವಳಿ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಇದೇ ಮಹೇಂದ್ರ ಕುಮಾರ್. 2002ರಲ್ಲಿ ಶೃಂಗೇರಿಯಲ್ಲಿ ಎಡ ಪಂಥೀಯರು ಆಯೋಜಿಸಿದ್ದ ಮೇಧಾ ಪಾಟ್ಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೋಮುವಾದಿ ಎಂಬ ನಕ್ಸಲ್ ನಂಟಿರುವ ಪುಸ್ತಕವನ್ನು ಹಂಚಲಾಗುತ್ತಿದೆ ಎಂದು ಮಹೇಂದ್ರ ಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಲು ಮುಂದಾದಾಗ ಶೃಂಗೇರಿಯಲ್ಲಿ ಗಲಾಟೆ ಕೂಟ ನಡೆದಿತ್ತು. ಬಜರಂಗದಳದಿಂದ ಹಿಂದೆ ಸರಿದ ಮೇಲೆ ಜೆಡಿಎಸ್ ಸೇರಿದ್ದರು. ಜೆಡಿಎಸ್‍ನಿಂದಲೂ ದೂರವಾದ ಬಳಿಕ ಯೂಟ್ಯೂಬ್ ಚಾನೆಲ್ ಆರಂಭಿಸಿ, ಪ್ರಗತಿಪರ ಚಿಂತನೆಯತ್ತ ತಮ್ಮನ್ನ ತೊಡಗಿಸಿಕೊಂಡಿದ್ದರು. ಇದೀಗ ಅವರ ನಿಧನದಿಂದ ಅವರ ಅಪಾರ ಅಭಿಮಾನಿ ಬಳಗಕ್ಕೂ ತುಂಬಲಾರದ ನಷ್ಟ ಸಂಭವಿಸಿದೆ.

Pramod Murtalik A

Share This Article
Leave a Comment

Leave a Reply

Your email address will not be published. Required fields are marked *