ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು. 2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಮಾಜಿ ಸ್ಪೀಕರ್ ಕೋಳಿವಾಡ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ, ಕಳೆದ 40 ವರ್ಷದಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದು ನಾನು. ಈಗ ಬಂದವರಿಗೆ ಮಣೆ ಹಾಕಿದರೆ, ನನ್ನ ಅಸ್ತಿತ್ವದ ಪ್ರಶ್ನೆ ಶುರುವಾಗುತ್ತೆ. ಪಕ್ಷವನ್ನು ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿ ಅನಿವಾರ್ಯವಾಗಿ ಸ್ವತಂತ್ರ ಅಭ್ಯರ್ಥಿಗಳನ್ನು ಮಂತ್ರಿ ಮಾಡಿಕೊಳ್ಳೋಣ ಎಂದು ನಿರ್ಧರಿಸಿದೆ. ಹೀಗಾಗಿ ಇಲ್ಲಿನ ನಾಯಕರು ಒಪ್ಪಿ ನಾಳೆ ಸಚಿವ ಸಂಪುಟ ವಿಸ್ತರಣೆ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರಕ್ಕೆ ನನ್ನ ಒಲವು ಇರಲಿಲ್ಲ ಎಂದು ಹೇಳಿದ್ದಾರೆ.
ಹಿಂದೆ ನಾನು ಧರಂಸಿಂಗ್ ಅವಧಿಯಲ್ಲಿ ಹೇಳಿದ್ದೆ. ಈಗಲೂ ನಾನು ಇದನ್ನೇ ಹೇಳುತ್ತೇನೆ. ಜೆಡಿಎಸ್ ಜೊತೆ ಮೈತ್ರಿ ಸರಿಯಲ್ಲ. ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿರಬೇಕಿತ್ತು. ಆಗ ನಮ್ಮ ಪಕ್ಷ ಮತ್ತಷ್ಟು ಬೆಳೆಯುತ್ತಿತ್ತು. ಜೆಡಿಎಸ್ ಜೊತೆ ಮೈತ್ರಿ ನಮಗೆ ಹೊಂದಿಕೆಯಾಗಲ್ಲ. ವಿರೋಧ ಪಕ್ಷದಲ್ಲಿ ಕುಳಿತಿದ್ದರೂ ನಮ್ಮ ಪಕ್ಷ ಇನ್ನೂ ಚೆನ್ನಾಗಿ ಬೆಳೆಯುತ್ತಿತ್ತು. ಮೈತ್ರಿಯಿಂದಾಗಿಯೇ ನಾವು ಲೋಕ ಚುನಾವಣೆಯಲ್ಲಿ ಸೋಲಬೇಕಾಯಿತು. ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು ಎಂದಿದ್ದಾರೆ.
2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ. ಸಮ್ಮಿಶ್ರ ಸರ್ಕಾರದ ಕಲ್ಪನೆಯೇ ಬೇಡ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಸಾಕಷ್ಟು ಹಿನ್ನಡೆಯಾಗಿದೆ. ಹೈಕಮಾಂಡ್ ಸೂಚನೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಈಗಲೂ ಸರ್ಕಾರ ಉಳಿಸಿಕೊಳ್ಳುವ ಭಯವಿದೆ. ಹೀಗಾಗಿಯೇ ಮೈತ್ರಿ ಮುಂದುವರಿಸಿದ್ದಾರೆ. ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕಿಡಿಕಾರಿದ್ದಾರೆ.
ಮಧ್ಯಂತರ ಚುನಾವಣೆಗೆ ಸಿದ್ದರಾಮಯ್ಯ ರೆಡಿಯಿದ್ದಾರೆ. ನಾಳೆ(ಶುಕ್ರವಾರ) ಚುನಾವಣೆ ನಡೆದರೆ ನಾನು ಫೈಟಿಗೆ ರೆಡಿ. ಪಕ್ಷೇತರ ಶಾಸಕ ಶಂಕರ್ ವಿರುದ್ಧ ಕ್ಷೇತ್ರದಲ್ಲಿ ಅಸಮಾಧಾನವಿದೆ. ಅವರ ಕಡೆಯವರೆಲ್ಲರೂ ನನ್ನ ಜೊತೆ ಬಂದಿದ್ದಾರೆ. ಹೈಕಮಾಂಡ್ ಜೊತೆಯೂ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ಆದರೆ ಕಾಲ ಬರಲಿ ಎಂದು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಹೋಗಬೇಕೋ ಬೇಡವೋ ಎಂದು ಹೈಕಮಾಂಡ್ ಡಿಸೈಡ್ ಮಾಡುತ್ತದೆ ಎಂದರು.
ಸಿದ್ದರಾಮಯ್ಯ ನಮ್ಮ ಸಮಕಾಲೀನರು. ಸಿದ್ದರಾಮಯ್ಯ ಜೊತೆಯೂ ಮಾತನಾಡಿದ್ದೇನೆ. ಹಿಂದೆ ಸಚಿವ ಸ್ಥಾನದಿಂದ ಶಂಕರ್ ತೆಗೆದಿದ್ದಕ್ಕೆ ಸಿದ್ದರಾಮಯ್ಯ ಕಾರಣರಾಗಿದ್ದರು. ಆದರೆ ಈಗ ಅವರೇ ಶಂಕರ್ ಅವರನ್ನ ತೆಗೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ವೆರಿ ಗುಡ್ ಲೀಡರ್ ಎಂದು ಮಾಜಿ ಸಿಎಂ ಬಗ್ಗೆ ಕೋಳಿವಾಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್.ಶಂಕರ್ ಒಬ್ಬ ಅವಕಾಶ ವಾದಿ. ಅವಕಾಶಕ್ಕಾಗಿ ಯಾವಾಗ ಬೇಕಾದರು ಬದಲಾಗುತ್ತಾರೆ. ಆರ್.ಶಂಕರ್ ವಿರುದ್ಧ ಕೋಳಿವಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಕೆಪೇಬಲ್ ಇದಾರೆ ಇಲ್ಲ ಅಂತ ಹೇಳಲಾರೆ. ಕೆಲವೊಂದು ಬಾರಿ ಸತ್ಯ ಸಂಗತಿಯನ್ನು ಹೇಳಲೇಬೇಕಾಗುತ್ತದೆ. ಮಾನಸಿಕವಾಗಿ ಬಹುತೇಕ ನಾಯಕರು ಮಧ್ಯಂತರ ಚುನಾವಣೆ ಎದುರಿಸೋಕೆ ಸಿದ್ಧರಾಗಿದ್ದರೆ. ಬಹಳಷ್ಟು ಕಾಂಗ್ರೆಸಿಗರಿಗೆ ಮಧ್ಯಂತರ ಚುನಾವಣೆಯ ಬಗ್ಗೆಯೇ ಹೆಚ್ಚಿನ ಒಲವಿದೆ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಮಗೆ ಬಹಳ ಒಳ್ಳೆಯದು. ವಿರೋಧ ಪಕ್ಷದಲ್ಲಿ ಕುಳಿತೇ ಜನರ ಮುಂದೆ ಹೋಗುತ್ತೇವೆ.