ಬೆಂಗಳೂರು: ಪರಿಹಾರ ನೀಡದೇ ತಮ್ಮ ಜಮೀನುಗಳಲ್ಲಿ ಪವರ್ ಗ್ರಿಡ್ ಕಂಪನಿ ವಿದ್ಯುತ್ ಕಂಬಗಳನ್ನು ಹಾಕುತ್ತಿದೆ ಎಂದು ಆರೋಪಿಸಿ ರೈತರು ವಿದ್ಯುತ್ ಕಂಬ ಏರಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊರವಲಯದ ಆನೇಕಲ್ ತಾಲೂಕು ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ರೈತರ ಹೊಲದಲ್ಲಿ ತಮಿಳುನಾಡಿನ ಧರ್ಮಪುರಿಯಿಂದ ರಾಮನಗರದ ಸೋಮನಹಳ್ಳಿ ಪವರ್ ಸ್ಟೇಷನ್ ವರೆಗೆ 400 ಕೆವಿ ಯ ಹೈಟೆನ್ಷನ್ ಪವರ್ ಪ್ರೊಜೆಕ್ಟ್ ನ್ನು ಪವರ್ ಗ್ರಿಡ್ ಕಂಪನಿ ನಿರ್ಮಿಸುತ್ತಿದೆ. ಆದರೆ ಕಂಪನಿ ಯಾವುದೇ ಪರಿಹಾರವನ್ನು ನೀಡದೇ ನಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
Advertisement
ಕೇಂದ್ರ ಸರ್ಕಾರ ತಯಾರು ಮಾಡಿರುವ ಸ್ಯಾಟಲೈಟ್ ನೀಲಿ ನಕ್ಷೆಯನ್ನು ಬಿಟ್ಟು ಅಕ್ರಮವಾಗಿ ನಮ್ಮ ಜಮೀನುಗಳಲ್ಲಿ ಕಾಮಗಾರಿಯನ್ನು ನಡೆಸುತ್ತಿದೆ. ಪ್ರಭಾವಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಜಮೀನುಗಳ ಮೇಲೆ ಹೋಗುತ್ತಿದ್ದ ಕಂಬಗಳ ಮಾರ್ಗ ಬದಲಿಸಿ ಅಧಿಕಾರಿಗಳು ನಮ್ಮ ಜಮೀನುಗಳಲ್ಲಿ ಕಂಬಗಳನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿದ ರೈತರು, ಬನ್ನೇರುಘಟ್ಟ ಸಮೀಪದ ಬೆಲಮರದದೊಡ್ಡಿ ಬಳಿ ನಿರ್ಮಿಸುತ್ತಿರುವ ಹೈಟೆಕ್ಷನ್ ಕಂಬವನ್ನು ಏರಿ ಪ್ರತಿಭಟನೆ ನಡೆಸಿದರು.