ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು ಪ್ರಸ್ತಾಪವೇ ಆಗಿಲ್ಲ ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಪೈಪೋಟಿ – ಮೊದಲ ದಿನವೇ 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
Advertisement
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಚರ್ಚೆ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮ ಕುಟುಂಬದ ಬಗ್ಗೆ ಗೌರವ ಇಟ್ಟು ಸಭೆಗೆ ಆಹ್ವಾನ ನೀಡಿದ್ದರು. 17 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಜೂನ್ 20ರಂದು ಮತ್ತೊಂದು ಸುತ್ತಿನ ಸಭೆ ಇದೆ. ಅಂದು ಅಭ್ಯರ್ಥಿ ಆಯ್ಕೆ ಅಂತಿಮ ಮಾಡಲಾಗುತ್ತದೆ ಎಂದು ಹೇಳಿದರು.
Advertisement
Advertisement
ದೇವೇಗೌಡರಿಗೆ ಜೀವನದಲ್ಲಿ ಒಮ್ಮೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಸ್ವತಂತ್ರ ಸರ್ಕಾರ ಬರಬೇಕು ಎಂಬ ಆಸೆ ಇದೆ. ಸ್ವತಂತ್ರ ಸರ್ಕಾರದ ಬಗ್ಗೆ ಅವರ ಆಸೆ ಪೂರೈಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರ ಹೊರತಾಗಿ,ರಾಷ್ಟ್ರಪತಿ ಹುದ್ದೆಯ ಬಗ್ಗೆ ದೇವೇಗೌಡರ ಒಲವು ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.