ಮೈಸೂರು: ಅರಮನೆ ನಗರಿಯಲ್ಲಿ ಪ್ರಚಾರ ಕಣಕ್ಕಿಳಿದ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಬಂಡಾಯದ ಬಿಸಿ ತಟ್ಟಿದೆ.
ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಂಗಪ್ಪ ಪರ ಪ್ರಚಾರ ಮಾಡುತ್ತಿದ್ದ ದೇವೇಗೌಡರ ಎದುರಲ್ಲೇ ಪಕ್ಷೇತರ ಅಭ್ಯರ್ಥಿ ಹರೀಶ್‍ಗೌಡ ಪರ ಬೆಂಬಲಿಗರು ಜೈಕಾರ ಹಾಕಿದ್ದಾರೆ. ಇದರಿಂದಾಗಿ ರೋಡ್ ಶೋನಲ್ಲಿ ಭಾಗಿಯಾಗಿದ್ದ ದೊಡ್ಡಗೌಡರಿಗೆ ತೀವ್ರ ಮುಜುಗರ ಉಂಟಾದ ಪ್ರಸಂಗ ನಡೆದಿದೆ.
ಹರೀಶ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಅವರು ಚಾಮರಾಜ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಿನ್ನೆ ದೇವೇಗೌಡರು ಪ್ರಚಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಮುಖಾಮುಖಿಯಾದ ಕಾರ್ಯಕರ್ತರು ಹರೀಶ್ ಗೌಡ ಅವರಿಗೆ ಮಾಜಿ ಪ್ರಧಾನಿ ಎದುರೇ ಜೈಕಾರ ಹಾಕಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರು ಲಕ್ಷ್ಮೀಕಾಂತ್ ನಗರ, ಸುಬ್ರಹ್ಮಣ್ಯ ನಗರ, ಹೆಬ್ಬಾಳು, ಮಂಚೇಗೌಡ ಕೊಪ್ಪಲು, ಮೇಟಗಹಳ್ಳಿಯಲ್ಲಿ ಮೊದಲಾದ ಕಡೆಗಳಲ್ಲಿ ಪ್ರಚಾರ ನಡೆಸಿದ್ದರು.