– ಕೆ ಆರ್ ಪೇಟೆಯಲ್ಲಿ ಸ್ಥಳೀಯರಿಗೆ ಟಿಕೆಟ್
ಮೈಸೂರು: ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲರೂ ಪ್ರಾಮಾಣಿಕರಾ, ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರಾ, ಅವರಲ್ಲಿ ತಪ್ಪು ಮಾಡಿದವರೇ ಇಲ್ವಾ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರಶ್ನಿಸಿದರು.
ನಗರದಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆದಾಯ ತೆರಿಗೆ ಇಲಾಖೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಲ್ಲಾ ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಎದುರಾಳಿಗಳ ಅಣಿಯಲ್ಲೂ ತನಿಖಾ ಸಂಸ್ಥೆಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಜಿ. ಪರಮೇಶ್ವರ್ ತಂದೆ ಮೆಡಿಕಲ್ ಕಾಲೇಜ್ ಸ್ಥಾಪಿಸಿ ಅದನ್ನು ಬೆಳೆಸಿದ್ದಾರೆ. ಅವರೇನೂ ನಿನ್ನೆ ಮೊನ್ನೆ ಶ್ರೀಮಂತರಾದವರಲ್ಲ. ಪರಮೇಶ್ವರ್ ತಂದೆ ಮಾಡಿದ ಆಸ್ತಿ ಅದು. 50 ವರ್ಷದ ಹಿಂದೆಯೇ ಅವರು ಈ ಆಸ್ತಿ ಮಾಡಿದ್ದರು. ಪರಮೇಶ್ವರ್ ಏನು ಮಾಡಿದ್ದಾರೆ. ಹೊಸ ಪ್ರವೇಶಾತಿಯಲ್ಲಿ ಒಂದಿಷ್ಟು ವ್ಯತ್ಯಾಸ ಆಗಿರಬಹುದು. ಪರಮೇಶ್ವರ್ ದಿಢೀರನೆ ಐದು ಸಾವಿರ ಕೋಟಿ ಆಸ್ತಿ ಮಾಡಿಲ್ಲ ಎಂದು ಪರಂ ಪರ ಹೆಚ್ ಡಿಡಿ ಬ್ಯಾಟಿಂಗ್ ಮಾಡಿದ್ರು.
ಇದೇ ವೇಳೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಬಗ್ಗೆ ಮಾತಾಡಿ, ಮೈತ್ರಿ ಸರ್ಕಾರ ಇದ್ದಾಗ ಜಾರಿಗೆ ತಂದ ನನ್ನ ಒಂದು ಕಾರ್ಯಕ್ರಮವೂ ನಿಲ್ಲಬಾರದು ಎಂದು ಸಿದ್ದರಾಮಯ್ಯ ಕಂಡೀಷನ್ ಹಾಕಿದರು. ಆ ಯೋಜನೆಗಳನ್ನು ಮುಂದುವರಿಸಿ, ಅದಕ್ಕೆ ಹಣ ಹೊಂದಿಸಿ ನಂತರ ಕೊಡಗಿಗೂ ಹೆಚ್‍ಡಿ ಕುಮಾರಸ್ವಾಮಿ ಪರಿಹಾರ ಹಣ ಕೊಟ್ಟರು. ಆಗ ಕೇಂದ್ರ ಸರ್ಕಾರ ತಕ್ಷಣ ಒಂದು ರೂಪಾಯಿ ಕೊಟ್ಟಿರಲಿಲ್ಲ ಎಂದರು.
ಕುಮಾರಸ್ವಾಮಿ ಎಲ್ಲವನ್ನೂ ಸರಿದೂಗಿಸಿದ್ದರು ಎಂದು ಮಗನ ಆಡಳಿತವನ್ನು ಪ್ರಶಂಸಿಸಿದರು. ನಾನೇನೂ ಅಧಿಕಾರ ಕೊಡಿ ಎಂದು ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ. ಗುಲಾಂ ನಬಿ ಅಜಾದ್ ಅವರೇ ಮನೆಗೆ ಬಂದು ನನ್ನ ಕೈ ಹಿಡಿದು ಕೊಂಡು ಒದ್ದಾಡಿ ನಮಗೆ ಅಧಿಕಾರ ಕೊಟ್ಟರು. ನಮಗೆ ಅಧಿಕಾರ ಬೇಡ, ಖರ್ಗೆ ಅವರನ್ನು ಸಿಎಂ ಮಾಡಿ ಅಂದೇ ಆದರೂ ಕೈ ಹಿಡಿದುಕೊಂಡು ನನ್ನನ್ನು ಒಪ್ಪಿಸಿದರು ಎಂದರು.
ಹುಣಸೂರು ಉಪ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಪ್ರಜ್ವಲ್ ಇನ್ನು ಚುನಾವಣೆಗೆ ಬರಲ್ಲ. ಅವನು ಎಂಪಿ ಆಗಿದ್ದಾನೆ. ನಿಖಿಲ್ ಕೂಡ ಬರಲ್ಲ, ಇಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡುತ್ತೇವೆ ಎಂದ ದೇವೇಗೌಡರು, ಚುನಾವಣೆ ನಡೆಯೋದು ಅನುಮಾನ ಇದೆ. ಯಾಕಂದರೆ ಸುಪ್ರೀಂ ಕೋರ್ಟ್ ತೀರ್ಪು ಏನು ಬರುತ್ತೆ ಅದರ ಮೇಲೆ ಎಲ್ಲವೂ ನಿರ್ಣಯ ಆಗುತ್ತದೆ ಎಂದರು.
ಕಲಾಪಗಳಿಗೆ ಮಾಧ್ಯಮ ಪ್ರವೇಶ ನಿಷೇಧ ವಿಚಾರ ಸಂಬಂಧ ಸ್ಪೀಕರ್ ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ. ಇದು ಅತ್ಯಂತ ದೊಡ್ಡ ದುರ್ಘಟನೆ. ಸರ್ಕಾರ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ. ವ್ಯಕ್ತಿ ದ್ವೇಷದಿಂದ ಯಾರ ವಿರುದ್ಧವೂ ಹೋರಾಟ ಮಾಡಲ್ಲ. ಯಡಿಯೂರಪ್ಪ ಎಷ್ಟೇ ಜೋರಾಗಿ ಮಾತಾಡಿದರೂ ನಾನು ದ್ವೇಷದಿಂದ ಮಾತಾಡಲ್ಲ ಎಂದು ತಿಳಿಸಿದರು.