ಹಾಸನ: ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ. ನನ್ನ ಹಿಂದೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಪ್ರತಿನಿತ್ಯ ನಾನು ದೆಹಲಿಗೆ ಹೋಗುತ್ತಿಲ್ಲ. ರಾಷ್ಟ್ರ ರಾಜಕಾರಣ ಮಾತನಾಡಲು ಬೇರೆ ನಾಯಕರು ಕರೆದರು ಸಹ ನಾನು ಹೋಗಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಹೊಳೆನರಸಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 15 ದಿನದಿಂದ ಪಕ್ಷದ ಕಚೇರಿಯಲ್ಲಿ ಇದ್ದೇನೆ. ಪ್ರತಿ ಜಿಲ್ಲೆಯಲ್ಲಿ ಪಕ್ಷ ತಳಮಟ್ಟದಿಂದ ಕಟ್ಟಲು ಪದಾಧಿಕಾರಿಗಳು ಮಾಡುವ ಕೆಲಸ ಗುರುತಿಸುತ್ತಿದ್ದೇನೆ ಎಂದರು.
Advertisement
ವಿಶ್ವನಾಥ್ ಬಿಟ್ಟು ಹೋದ ಮೇಲೆ ಕುಮಾರಸ್ವಾಮಿ ಪಕ್ಷ ನಿಷ್ಠೆಯಿಂದ ಇದ್ದಾರೆ. 6 ಬಾರಿ ಶಾಸಕರಾಗಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ಸರ್ಕಾರ ಮೂರು ವರ್ಷ ಎಂಟು ತಿಂಗಳು ನಡೆಯಬಹುದು. ನಮ್ಮ ಯಾವುದೇ ತಕರಾರು ಇಲ್ಲ. ಒಳ್ಳೆಯ ಕೆಲಸ ಮಾಡಿದರೆ ಸಂತೋಷ ಪಡುತ್ತೇವೆ. ಜನರ ಸಮಸ್ಯೆಗಳಿಗೆ ಹೋರಾಡುತ್ತೇವೆ ಎಂದು ಅವರು ತಿಳಿಸಿದರು.
Advertisement
Advertisement
ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಶಕ್ತರು ಎನ್ನುವ ಭರವಸೆ ಇದೆ. ವಾಜಪೇಯಿ ಪ್ರಧಾನಿ ಆಗಿದ್ದಾಗ ನಾನು ಬರಕ್ಕಾಗಿ ಅವರ ಬಳಿ ರೈತರನ್ನು ಕರೆದುಕೊಂಡು ದಿಲ್ಲಿಗೆ ಹೋಗಿದ್ದೆನು. ವಿಧಾನಸಭೆ, ಲೋಕಸಭೆ ಇದ್ದರೂ ಇಲ್ಲದಿದ್ದರೂ ನಾನು ನನ್ನ ರಾಜಕಾರಣ ಮಾಡಿದ್ದೇನೆ ಎಂದರು.
Advertisement
ನಾನೇನು ಕೆಲಸ ಮಾಡಿದ್ದೇನೆ, ಪ್ರಧಾನಿ, ಸಿಎಂ ಆಗಿದ್ದಾಗ ಎಲ್ಲಾ ವಿಚಾರಗಳನ್ನು ಗಮನ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಇದರಲ್ಲಿ ದೈವಾನುಗ್ರಹ ಬೇಕು. ಇದಕ್ಕಾಗಿ ಪ್ರತಿವರ್ಷ ದೇವರ ಬಳಿ ಹೋಗುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿಧನ ಸಂಬಂಧ ಪ್ರತಿಕ್ರಿಯಿಸಿದ ಎಚ್‍ಡಿಡಿ, ಜೇಟ್ಲಿ ನಿಧನವಾಗಿದ್ದು ತೀವ್ರವಾಗಿ ದುಖದ ವಿಚಾರವಾಗಿದೆ. ಒಬ್ಬ ಮುತ್ಸದಿ ನಾಯಕ. ಯಾವುದೇ ಪಕ್ಷವಾಗಲಿ, ಮಂತ್ರಿಗಳಾಗಿ ಹಲವಾರು ಇಲಾಖೆಗಳಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿ ಸಂತಾಪ ಸೂಚಿಸಿದರು.
ಹಾಸನದಲ್ಲಿ ನಾನು 29 ವರ್ಷ ವಿಧಾನಸಭಾ ಕ್ಷೇತ್ರ ಮತ್ತು 25 ವರ್ಷ ಶಾಸಕನಾಗಿ ನನ್ನ ಕೆಲಸ ಮಾಡಿದ್ದೇನೆ. ನನ್ನ ಜನತೆಗೆ ನೋವು ಇದೆ. ನೀವು ಇಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದರು. ಆದರೆ ಕೆಲವೊಮ್ಮೆ ವಿಧಿ ನಮ್ಮ ಕೈಯಲ್ಲಿ ಇರೋದಿಲ್ಲ. ಧರ್ಮರಾಯ ಎಲ್ಲರನ್ನು ಕರೆದುಕೊಂಡು ಬರುತ್ತಾನೆ. ಕಾಲ ಕಳೆಯಲು ಅವಕಾಶ ಇದೆ ಎಂದು ಹೇಳಿ ಜೂಜಿನಲ್ಲಿ ಎಲ್ಲವನ್ನು ಕಳೆದುಕೊಂಡು ದ್ರೌಪದಿ ಶಾಪ ಕೊಟ್ಟಾಗ ಇಂದ್ರಪ್ರಸ್ಥ ತಲುಪುವುದೇ ಇಲ್ಲ. ಒಂದೇ ಆಟ ಎಂದು ಹೇಳಿ ಕೊನೆಯ ಆಟ ಆಡುತ್ತಾನೆ. ಅದೇ ಮೋಸಗಾರನ ಜೊತೆಯಲ್ಲಿಯೇ ಆಡುತ್ತೇನೆ ಎಂದು ಧರ್ಮರಾಯ ಹಸ್ತಿನಾಪುರದ ರಾಜನಿಗೆ ಹೇಳುತ್ತಾನೆ. ಅದೇ ರೀತಿ ನಾನು ಕೂಡ ಮೋಸ ಆಗುವುದು ಗೊತ್ತಿದ್ದರೂ ಚುನಾವಣೆಗೆ ನಿಂತು ಸೋತೆ ಎಂದು ಹೇಳಿದರು.
ಆಂಗ್ಲ ಪತ್ರಿಕೆಯಲ್ಲಿ ಕೊಟ್ಟ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಮಾತಾಡಿದ ಬಗ್ಗೆ ಈಗ ಯಾಕೆ. ಜನರ ಬಳಿ ಹೋಗೋಣ. ಅವರೇ ತೀರ್ಮಾನಿಸುತ್ತಾರೆ. ಮುಂದೆ ಹೋರಾಟ ಮಾಡುವವನು ನಾನೇ ತಾನೇ, ಹೀಗಾಗಿ ಮುಂದೆ ಮಾತಾಡುತ್ತೇನೆ. ನಾನು ಯಾರನ್ನೂ ನಿಂದನೆ ಮಾಡಿಲ್ಲ. ಸಿದ್ದರಾಮಯ್ಯ ಕುರಿತು ಪದೇ ಪದೇ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಈ ಪಕ್ಷ ಕಟ್ಟುವುದು ದೊಡ್ಡ ವಿಚಾರ. ನನ್ನ ಪಕ್ಷದ ಕಾರ್ಯಕರ್ತರ ಭರವಸೆ ನನಗೆ ಇದೆ ಎಂದು ಗರಂ ಆದರು.
ರೇವಣ್ಣ ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ನಿಖಿಲ್ ಸಹ ಕೆಲಸ ಮಾಡುತ್ತಿದ್ದಾರೆ. ಸೋತರೂ ಸಹ ಕೆಲಸ ಮಾಡುತ್ತೇವೆ. ಜನ ಕೊಟ್ಟ ತೀರ್ಮಾನಕ್ಕೆ ತಲೆಬಾಗಿದ್ದೇವೆ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ನೋಡೋಣ ಎಂದರು.