ಮಂಡ್ಯ/ಮೈಸೂರು: ಮಂಡ್ಯದಲ್ಲಿ ಮಾತ್ರವಲ್ಲದೆ ಮೈಸೂರಲ್ಲೂ ಗುರು-ಶಿಷ್ಯರ ಮತಬೇಟೆ ಶುಕ್ರವಾರ ಜೋರಾಗಿತ್ತು. ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ರು. ಇತ್ತ ಮೈಸೂರು ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಕೇಂದ್ರ ಬಿಂದುವಾಗಿದ್ದರು.
ರಾಜ್ಯ ರಾಜಕಾರಣದಲ್ಲಿ ಗುರು ಶಿಷ್ಯರದ್ದೇ ಸುದ್ದಿ. ಮಂಡ್ಯದಲ್ಲಿ ನಿಖಿಲ್ ಗೆಲುವಿಗಾಗಿ ಶತಾಯಗತಾಯ ಸರ್ಕಸ್ ನಡೆಸ್ತಿರೋ ದೋಸ್ತಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಪರವಾಗಿ ಮಂಡ್ಯದಲ್ಲಿ ಗುರು-ಶಿಷ್ಯರಾದ ದೇವೇಗೌಡ, ಸಿದ್ದರಾಮಯ್ಯ ಪ್ರಚಾರ ನಡೆಸಿ ಬಳಿಕ ಮೈಸೂರಿನಲ್ಲಿ ವಿಜಯ್ ಶಂಕರ್ ಪರವಾಗಿ ಮತಯಾಚಿಸಿದ್ರು.
Advertisement
Advertisement
ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ-ಜಿಟಿಡಿ!
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈತ್ರಿ ಪಕ್ಷದ ಪ್ರಚಾರ ಸಭೆಯ ಮುಖ್ಯ ಕೇಂದ್ರ ಬಿಂದುಗಳಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ. ದೇವೇಗೌಡ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಸಿದ್ದರಾಮಯ್ಯರನ್ನು ಜಿ.ಟಿ. ದೇವೇಗೌಡ ಸೋಲಿಸಿದ್ದರು. ಅಂದಿನಿಂದ ಇಬ್ಬರು ಪರಸ್ಪರ ಮುಖ ನೋಡೋದು ಬಿಡಿ ಒಂದೇ ವೇದಿಕೆಯಲ್ಲಿ ಕೂರುವುದು ಬಹುದೂರದ ಮಾತಾಗಿತ್ತು. ಅದಾದ ನಂತರ ಶುಕ್ರವಾರ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ನಾವು ಮುನಿಸು ಮರೆತು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದರು.
Advertisement
ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಂಡ್ಯದಲ್ಲಿ ಸುಮಲತಾರಿಗೆ ಬಿಜೆಪಿ ಸಹಕಾರ ನೀಡಿದೆ. ಅಂದರೆ ಸುಮಲತಾ ಕೂಡ ಬಿಜೆಪಿ ಅಭ್ಯರ್ಥಿಯೇ ಆಗಿದ್ದಾರೆ. ಕೋಮುವಾದಿ ಪಕ್ಷವನ್ನು ನಾವು ಸೋಲಿಸಬೇಕಿದೆ ಎಂದು ಸುಮಲತಾರನ್ನ ಕೋಮುವಾದಿಗೆ ಹೋಲಿಸಿದ್ದಾರೆ. ಇದಕ್ಕೂ ಮೊದಲು ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ರು.
Advertisement
ಇನ್ನೊಂದೆಡೆ ಸಿದ್ದರಾಮಯ್ಯ ಮತ್ತು ಜಿಟಿಡಿ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಂಟಿಯಾಗಿ ಪ್ರಚಾರ ಕೂಡ ನಡೆಸಲಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ದೋಸ್ತಿಗಳು ವೈರತ್ವವೆಲ್ಲಾ ಮರೆತು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಗುರು ಶಿಷ್ಯರ ಮೋಡಿ ಎಷ್ಟು ವರ್ಕೌಟ್ ಆಗತ್ತೆ ಎಂದು ರಿಸಲ್ಟ್ ವರೆಗೆ ಕಾಯಲೇಬೇಕು.