– ಸಿಎಂ ಆದೇಶಕ್ಕೆ ಕ್ಯಾರೇ ಎನ್ನದ ಜೆಡಿಎಸ್ ಜಿಲ್ಲಾಧ್ಯಕ್ಷ
ಚಿತ್ರದುರ್ಗ: ಸ್ವತಃ ತಾವೇ ಆದೇಶ ಹೊರಡಿಸಿ ಇಂದು ಬೆಳಗಾವಿಯಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಂಡರೆ, ಇತ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೂಡ ತಮ್ಮ ಪಕ್ಷದ ಜಿಲ್ಲಾಧ್ಯಕ್ಷನ ಮಗನ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ರಾಜ್ಯಾದ್ಯಂತ ಹಬ್ಬ ಹರಿದಿನಗಳು ಹಾಗೂ ಮದುವೆ, ಸಮಾರಂಭಗಳು ಸೇರಿದಂತೆ ಜಾತ್ರೆಯನ್ನು ಸಹ ನಡೆಸದಂತೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅದ್ದೂರಿಯಾಗಿ ಸಾವಿರಾರು ಜನರನ್ನು ಸೇರಿಸುವ ಮೂಲಕ ತಮ್ಮ ಮಗನ ವಿವಾಹವನ್ನು ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಹಿರಿಯೂರಿನ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಿಸಿದ್ದಾರೆ.
Advertisement
Advertisement
ಹಿರಿಯೂರಿನ ತಾಹ ಪ್ಯಾಲೇಸ್ ನಲ್ಲಿ ಯಶೋಧರ ಪುತ್ರ ವೈ.ಆರ್ ಗೌಡ ಜೊತೆ ಮೇಘನಾ ವಿವಾಹ ನಡೆಸಲಾಯಿತು. ಈ ಅದ್ದೂರಿ ಮದುವೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಹ ಆಗಮಿಸಿದ್ದರು. ಆಗ ಈ ಬಗ್ಗೆ ಪ್ರಶ್ನಿಸಲು ಮುಂದಾದ್ರೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಯಾವುದೇ ಚಕಾರ ಎತ್ತದೇ ಬೆಂಗಳೂರಿಗೆ ತೆರಳಿದರು. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ
Advertisement
ಈ ವೇಳೆ ವಿವಾಹ ಆಯೋಜಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಪ್ರತಿಕ್ರಿಯಿಸಿ, ಮಗನ ಮದುವೆಗಾಗಿ ಈ ಮೊದಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಲ್ಲದೇ ಸರಳವಾಗಿ ವಿವಾಹ ಮಾಡಲು, ಕಲ್ಯಾಣ ಮಂಟಪ ಸೇರಿದಂತೆ ಸಂಬಂದಿಗಳು ಹಾಗೂ ಸಾವಿರಾರು ಜನ ಹಿತೈಷಿಗಳಿಗೆ ಅಹ್ವಾನ ನೀಡಲಾಗಿತ್ತು. ಹೀಗಾಗಿ ತಕ್ಕಮಟ್ಟಿಗೆ ಅದ್ದೂರಿ ವಿವಾಹ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ ಎಲ್ಲೋ ಒಂದು ಕಡೆ ಸರ್ಕಾರದ ಆದೇಶ ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾಯ್ತ ಎಂಬ ಪ್ರಶ್ನೆ ಜನರಲ್ಲಿ ಮೂಡಿದ್ದು, ರಾಜಕಾರಣಿಗಳು ಹಾಗೂ ಪ್ರಭಾವಿಗಳು ಮಾತ್ರ ಅವರ ಮನಸ್ಸೋ ಇಚ್ಛೆಯಂತೆ ಅದ್ದೂರಿ ವಿವಾಹ ಹಾಗೂ ಸಾವಿರಾರು ಜನರನ್ನು ಸೇರಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಇಷ್ಟೊಂದು ಅದ್ದೂರಿ ವಿವಾಹ ನಡೆದು, ಮಾಜಿ ಪ್ರಧಾನಿಗಳು ಬಂದು ಹೋದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡ್ತಿರೋದು ಮಾತ್ರ ವಿಪರ್ಯಾಸವೇ ಸರಿ.