ಚಿಕ್ಕಮಗಳೂರು: ರಾಜಕೀಯವಾಗಿ ಒಂದಲ್ಲ ಒಂದು ರೀತಿ ಹಿನ್ನೆಡೆ ಕಾಣುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೊಸ ವರ್ಷದ ಆರಂಭದಲ್ಲಿ ಶಕ್ತಿ ದೇವತೆ ಶೃಂಗೇರಿಯ ಶಾರದಾಂಬೆಯ ಮೊರೆ ಹೋಗಿದ್ದಾರೆ. ಪತ್ನಿ ಜೊತೆ ಶೃಂಗೇರಿಗೆ ಆಗಮಿಸಿರುವ ದೊಡ್ಡಗೌಡರು ಮಂಗಳವಾರದವರೆಗೂ ಶಾರದಾಂಬೆ ಸನ್ನಿಧಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಯಾಗದ ಪೂರ್ಣಾಹುತಿ ನಡೆಯಲಿದ್ದು, ಅಂದು ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಇಡೀ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೊಡ್ಡ ಗೌಡರು ಶಾರದಾಂಬೆ ಮೊರೆ ಹೋಗುವುದು ಮಾಮೂಲಿ. ಇದೀಗ 5 ದಿನಗಳ ಕಾಲ ಶಾರದೆ ಸನ್ನಿಧಿಯಲ್ಲಿ ಗೌಡರು ಯಾಗ ಕೈಗೊಂಡಿರುವುದು ಭವಿಷ್ಯದಲ್ಲಿ ಮಹತ್ವದ ನಿರ್ಧಾರದ ಮುನ್ಸೂಚನೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಸಂಕ್ರಾಂತಿಯ ಮರುದಿನವೇ ಶೃಂಗೇರಿಗೆ ಆಗಮಿಸಿದ ಗೌಡರು, ಭಾರತಿ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಐದು ದಿನಗಳ ಕಾಲ ವಿಶೇಷ ಪೂಜೆ-ಹೋಮ-ಹವನದ ಬಳಿಕ ಹಿಂದಿರುಗಲಿದ್ದಾರೆ. ವಿಶೇಷ ಪೂಜೆ ಹಾಗೂ ಯಾಗಗಳನ್ನು ನಡೆಸುವ ದೇವೇಗೌಡರು, ಶಾರದಾಂಬೆಯಲ್ಲಿ ಏನನ್ನು ಬೇಡಿಕೊಳ್ಳುತ್ತಾರೆ, ಯಾವುದರ ಸಂಕಲ್ಪ ಮಾಡಲಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
Advertisement
Advertisement
2018ರಲ್ಲಿ ಮೈತ್ರಿ ಸರ್ಕಾರ ರಚನೆಯಾಗುವ ಮೊದಲು ದೇವೇಗೌಡರ ಕುಟುಂಬ ಶಾರದಾಂಬೆ ಸನ್ನಿಧಿಯಲ್ಲಿ 11 ದಿನಗಳ ಕಾಲ ನಡೆದ ಅತಿರುದ್ರ ಮಹಾಯಾಗ ನಡೆಸಿದರು. 2018ರ ಜನವರಿ 4 ರಿಂದ 15ರವರೆಗೆ ಈ ಯಾಗ ನಡೆದಿತ್ತು. ಇದಾದ ಕೆಲವೇ ತಿಂಗಳಲ್ಲಿ ಕುಮಾರಸ್ವಾಮಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಳಿಕ ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮೊದಲು ನಿಯೋಜಿತ ಸಿಎಂ ಆಗಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಸಿಎಂ ಆದ ಬಳಿಕವೂ ಕುಮಾರಸ್ವಾಮಿ ಹಾಗೂ ದೇವೇಗೌಡರು ನಾಲ್ಕೈದು ಬಾರಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದರು. ಸಮ್ಮಿಶ್ರ ಸರ್ಕಾರ ಬೀಳುವ ಸಂದರ್ಭದಲ್ಲಿ ರಾಜಕೀಯದ ಹಗ್ಗಜಗ್ಗಾಟದಲ್ಲೂ ದೇವೇಗೌಡರ ಕುಟುಂಬ ಸರ್ಕಾರ ಉಳಿಸಲು ಇದೇ ಶಾರದಾಂಬೆ ಮೊರೆ ಹೋಗಿದ್ದರು.
Advertisement
ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಉಪ ಚುನಾವಣೆಯಲ್ಲೂ ಜೆಡಿಎಸ್ ಸೋತು ಪಕ್ಷಕ್ಕೆ ತೀವ್ರ ಹಿನ್ನೆಡೆಯಾಗಿದೆ. ಹಾಗಾಗಿ ದೊಡ್ಡಗೌಡ್ರು ಮತ್ತೊಮ್ಮೆ ಪಕ್ಷ ಸಂಘಟನೆಗೆ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಬಲವರ್ಧನೆಗೆ ಪಣ ತೊಟ್ಟ ಗೌಡರು ಶಕ್ತಿ ಕೊಡು ತಾಯಿ ಎಂದು ಮತ್ತೊಮ್ಮೆ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ-ಹೋಮ-ಹವನ ಸೇರಿದಂತೆ ಯಾಗಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.