ಬೆಂಗಳೂರು: ಕಳೆದ ದಿನ 14 ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ತಡರಾತ್ರಿ ಮಾಜಿ ಪ್ರಧಾನಿ ದೇವೇಗೌಡರು ಸೋನಿಯಾ ಗಾಂಧಿಗೆ ಕರೆಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೇ ನಾನು ನಿಮಗೆ ಪತ್ರ ಬರೆದು ಎಚ್ಚರಿಸಿದ್ದೆ. ಆದರೆ ನೀವು ಅದನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ನಿಮ್ಮ ಪುತ್ರ ಕಳೆದ 6 ವರ್ಷದಿಂದ ಇಡಿ ಪಕ್ಷವನ್ನೆ ಸಿದ್ದರಾಮಯ್ಯ ಅವರ ಕೈಗೆ ಕೊಟ್ಟು ಮೈ ಮರೆತರು. ಇದರಿಂದ ಈಗ ದೋಸ್ತಿ ಸರ್ಕಾರಕ್ಕೆ ಗಂಡಾಂತರ ಬಂದಿದೆ ಎಂದು ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ರಾಜೀನಾಮೆ ನೀಡಿರುವ ಶಾಸಕರ ಪೈಕಿ ಸಿದ್ದರಾಮಯ್ಯ ಬೆಂಬಲಿಗರ ಸಂಖ್ಯೆಯೇ ಜಾಸ್ತಿಯಿದೆ. ಸಿದ್ದರಾಮಯ್ಯ ಶಾಸಕರ ರಾಜೀನಾಮೆಗೆ ಕುಮ್ಮಕ್ಕು ನೀಡಿ ನಮ್ಮ ಪಕ್ಷವನ್ನ ಹಾಳು ಮಾಡುವ ಜೊತೆಗೆ ರಾಜಕೀಯ ಪುನರ್ಜನ್ಮ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದಾರೆ. ಕಾಲ ಮಿಂಚಿ ಹೋಗಿದೆ. ನೀವು ಯಾವ ಉದ್ದೇಶದಿಂದ ಸರ್ಕಾರ ರಚಿಸೋಣ ಎಂದು ಹೇಳಿ ನಾವು ಸರ್ಕಾರ ರಚಿಸಿದ್ದೆವೋ ಆ ಸಿದ್ಧಾಂತ ಹಾಳಾಗಿ ಬಿಜೆಪಿ ತಲೆ ಎತ್ತುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ಸೋನಿಯ ಗಾಂಧಿಗೆ ಫೋನ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರು ಸೇರಿದಂತೆ ಒಟ್ಟು 13 ಮಂದಿ ಕಳೆದ ದಿನ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಿಎಂ ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಂದ ನಂತರ ಅವರ ನಡೆ ಏನು ಎಂದು ತಿಳಿದುಕೊಂಡು ಹೈಕಮಾಂಡ್ ಮುಂದಿನ ಹೆಜ್ಜೆಯಿಡಲು ಕಾಯುತ್ತಿದೆ.