ಲೋಕಸಭೆಯಲ್ಲಿ ಇದು ನನ್ನ ಕೊನೆ ಭಾಷಣವೂ ಆಗಬಹುದು: ಎಚ್.ಡಿ.ದೇವೇಗೌಡ

Public TV
2 Min Read
HD Deve Gowda 2

– ರಾಜಕೀಯ ನಿವೃತ್ತಿ ಸುಳಿವು ಬಿಚ್ಚಿಟ್ಟ ಮಾಜಿ ಪ್ರಧಾನಿ

ನವದೆಹಲಿ: ಲೋಕಸಭೆ ಅಧಿವೇಶದಲ್ಲಿ ಇದು ನನ್ನ ಕೊನೆಯ ಭಾಷಣ ಆಗಬಹುದು ಎನ್ನುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜಕೀಯ ನಿವೃತ್ತಿಯ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಲೋಕಸಭೆ ಅಧಿವೇಶನದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ. ರೈತನ ಮಗನಾಗಿ ಹುಟ್ಟಿದ್ದೇನೆ. ರೈತನಾಗಿ ಸಾಯುತ್ತೇನೆ ಎಂದ ಅವರು, ಬಜೆಟ್ ಮೇಲೆ ಮಾತನಾಡಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಅವಕಾಶ ಕೇಳಿದ್ದೆ. ಏಕೆಂದರೆ ಇದು ನನ್ನ ಕೊನೆ ಭಾಷಣವೂ ಆಗಬಹುದು ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

parliament Narendra Modi

ಇಷ್ಟು ದಿನ ನನಗೆ ಅವಮಾನ ಆಗಿದೆ. ಚಿಂತೆ ಇಲ್ಲ. ಭಾಷಣಕ್ಕೆ ಅವಕಾಶ ನೀಡುವುದಕ್ಕೆ ಸ್ಪಂದಿಸಿದ್ದ ಸ್ಪೀಕರ್, ಪ್ರಧಾನಿ ಮೋದಿ ಭಾಷಣ ಸಂಜೆ 5 ಗಂಟೆಗೆ ಆರಂಭವಾಗುತ್ತದೆ. ಹೀಗಾಗಿ ನಿಮಗೆ ನಾಲ್ಕು ಗಂಟೆಗೆ ಅವಕಾಶ ಕೊಡುತ್ತೇವೆ ಎಂದು ನಿನ್ನೆ ಹೇಳಿದ್ದರು. ಆದರೆ ಹೆಚ್ಚು ಮಾತನಾಡಲು ಅವಕಾಶ ನೀಡಲಿಲ್ಲ. ನಾನು ಯಾರನ್ನೂ ನಿಂದಿಸುವ ಕುರಿತು ಭಾಷಣ ಮಾಡಬೇಕಿರಲಿಲ್ಲ. ನಾನು 325 ದಿನ ದೇಶವನ್ನು ಮುನ್ನಡೆಸಿರುವೆ. ಆಗ ಯಾವ ಅಭಿವೃದ್ಧಿ ಕಾರ್ಯಗಳಾಗಿವೆ. ನನ್ನ ಕೊಡುಗೆ ಏನು ಎನ್ನುವುದು ರಾಷ್ಟ್ರದ ಜನತೆಗೆ ಗೊತ್ತಿಲ್ಲ. ಅವರಿಗೆ ಈ ಕುರಿತು ಮನವರಿಕೆ ಮಾಡುವುದಕ್ಕಾಗಿ ನಾನು ಭಾಷಣ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.

ನಾನು ನಿನ್ನೆ ಭಾಷಣ ಆರಂಭಿಸಿ 5 ನಿಮಿಷ ಕಳೆದಿತ್ತು. ಆಗ ಭಾಷಣ ನಿಲ್ಲಿಸುವಂತೆ ಸ್ಪೀಕರ್ ಸೂಚನೆ ಕೊಟ್ಟರು. ಆದರೂ ನಾನು ಮುಂದುವರಿದು ಕೆಲವು ವಿಷಯಗಳ ಕುರಿತು ಮಾತನಾಡಿದೆ. ಅದು ನನಗೆ ಸಮಾಧಾನವಿಲ್ಲ. ಪ್ರಧಾನಿ ಮೋದಿ ಅವರು ಅಧಿವೇಶನಕ್ಕೆ 6 ಗಂಟೆಗೆ ಆಗಮಿಸಿದರು. ಈ ಮಧ್ಯೆ ಅನೇಕ ಸಂಸದರು ಮಾತನಾಡಿದರು. ಇದು ಸ್ವಲ್ಪ ನೋವು ತಂದಿತ್ತು ಎಂದರು.

HDD 1 1

ಜನರು ನನ್ನನ್ನ ಮಣ್ಣಿನ ಮಗ ಅಂತ ಕರೆದಿದ್ದಾರೆ. ನಾನು ಯಾವತ್ತೂ ನನ್ನ ಹೀಗೆ ಕರೆಯಬೇಕು ಅಂತ ಯಾರಿಗೂ ಕೇಳಿಲ್ಲ, ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿ ಜನರಿಂದ ಮಣ್ಣಿನ ಮಗ ಅಂತ ಕರೆಸಿಕೊಳ್ಳುವ ದೇವೇಗೌಡರು ಕುಳಿತಿದ್ದಾರೆ ಅಂತ ನಿನ್ನೆ ಹೇಳಿದರು. ಅವರ ಮಾತುಗಳು ನನಗೆ ಬೇಸರ ತಂದಿದೆ ಎಂದು ಪ್ರಧಾನಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಸಂಖ್ಯೆ ಕಡಿಮೆ ಇದೆ. ಹಾಗಿದ್ದರೂ ಹಿಂದಿನ ಸರ್ಕಾರದ ಕೆಲಸಗಳ ಜೊತೆ ಸಾಲಮನ್ನಾ ಮಾಡಲಾಗಿದೆ. ಈ ಕುರಿತು ಸಂಸತ್ತಿನಲ್ಲಿ ನಾನು ಹೇಳಬೇಕಿತ್ತು. ಕಲಾಪವು ಇಂದು ಗದ್ದಲದಿಂದ ಕೂಡಿತ್ತು. ಯಾವ ವಿಚಾರಗಳನ್ನು ಹೇಳಲು ಸಾಧ್ಯವಾಗಲಿಲ್ಲ. ಮುಂದೆ ಬಜೆಟ್ ಬಗ್ಗೆ ಮಾತನಾಡುವಾಗ ಮಾತನಾಡುತ್ತೇನೆ. ಏಕೆಂದರೆ ನನ್ನ ಸರ್ಕಾರದ ಸಾಧನೆಗಳನ್ನು ಸಂಸತ್ತಿನಲ್ಲಿ ಹೇಳಬೇಕಿದೆ ಎಂದರು.

HD Deve Gowda 1

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಕೈಗೊಂಡ ರೈತರ ಸಾಲಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ಬೇಸರ ತಂದಿದೆ. ಅಧಿವೇಶನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಮತ್ತೆ ಕೇಳಿಕೊಂಡಿದ್ದೇನೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸೋಮವಾರ ಅವಕಾಶ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿದ್ದಾರೆ. ಆಪರೇಷನ್ ಕಮಲ ನಡೆಯುತ್ತಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಾನು ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ದೇವೇಗೌಡರು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *