ಬೆಂಗಳೂರು: ಬಿಜೆಪಿ ಇಂದು ಆಡಳಿರೂಢ ಪಕ್ಷವಾಗಿದೆ. ಸದ್ಯಕ್ಕೆ ಬಿಜೆಪಿ ಎಂದರೆ ಮೋದಿ ಎನ್ನುವಂತಾಗಿದೆ. ಆದರೆ ಕೆಲ ವರ್ಷಗಳ ಹಿಂದೆ “ಅಬ್ ಕೀ ಬಾರ್ ಅಟಲ್ ಸರ್ಕಾರ್” ಎಂದೇ ಕರೆಯಲಾಗುತ್ತಿತ್ತು. ಎಂತಹ ಸಂದರ್ಭದಲ್ಲೂ ಎದೆಗುಂದದ ಅಟಲ್ ಅವರ ಧೈರ್ಯ, ಪ್ರೋಖ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲೇ ಆಗಲಿ, ಕಾರ್ಗಿಲ್ ಯುದ್ಧದ ಸಮಯದಲ್ಲೇ ಆಗಲಿ ಅವರು ತೋರಿದ ದಿಟ್ಟತನ ಅವರೊಳಗಿದ್ದ ಪ್ರಖರ ರಾಜಕಾರಣಿಯ ಪರಿಚಯವನ್ನು ಮಾಡಿಕೊಟ್ಟಿತ್ತು. ಇಂತಹ ವಾಜಪೇಯಿಯವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲ, ತಮ್ಮಂತೆ ಬಿಜೆಪಿ ಪಕ್ಷಕ್ಕೆ ನೇತಾರರಾಗುವಂತಹ ಸಮರ್ಥ ಶಿಷ್ಯರನ್ನ ತಯಾರು ಮಾಡಿದರು. ಇವತ್ತು ಮೋದಿ ಭಾರತದ ಯಶಸ್ವಿ ಪ್ರಧಾನಿಯಾಗಿದ್ದಾರೆ ಅಂದರೆ ಅದರ ಹಿಂದಿರುವ ಶಕ್ತಿ ಅಡ್ವಾಣಿ ಮತ್ತು ವಾಜಪೇಯಿ ಮಾತ್ರ.
ವಾಜಪೇಯಿ ಎಂತಹ ಸಂದರ್ಭವನ್ನು ಹೇಗೆ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು ಎನ್ನುವುದಕ್ಕೆ ಒಂದು ಸಣ್ಣ ನಿದರ್ಶನವೆಂದರೆ, ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಉದ್ಭವಿಸಿದ್ದ ಕ್ಷೋಭೆಯನ್ನು ಸಂಭಾಳಿಸಿದ ರೀತಿ. 2002 ಫೆಬ್ರವರಿ 27. ಅಂದು ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಕೋಮುದಳ್ಳುರಿಯಲ್ಲಿ ನೊಂದು ಬೆಂದವರು ಸಾವಿರಾರು ಜನ. ಪ್ರಾಣ ಕಳೆದುಕೊಂಡವರು ನೂರಾರು ಮಂದಿ. ಗುಜರಾತ್ ರಾಜ್ಯದಲ್ಲಿ ನಡೆದ ಒಂದು ಹತ್ಯಾಕಾಂಡ ಭಾರತದ ಉದ್ದಗಲಕ್ಕೂ ಕಾವನ್ನು ಹರಡಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನರಮೇಧವನ್ನೇ ಮಾಡಿಬಿಟ್ಟರು.
Advertisement
ಭಾವೈಕ್ಯತೆಗೆ ಧಕ್ಕೆ ತಂದು ಬಿಟ್ಟರು ಎಂದು ಆರೋಪಿಸಲಾಯ್ತು. ಇದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ ಭಾರೀ ಮುಖಭಂಗವನ್ನು ಅನುಭವಿಸಬೇಕಾಗಿ ಬಂತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರ-ವಿರೋಧ ಚರ್ಚೆಗಳು ಹಲವು ದಿನಗಳ ಮಟ್ಟಿಗೆ ಭಾರೀ ಸಂಚಲನವನ್ನೇ ಉಂಟು ಮಾಡಿದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೋ ಬೇಡವೋ ಎನ್ನುವ ಜಿಜ್ಞಾಸೆ ತೀವ್ರವಾಗಿದ್ದ ಸಮಯದಲ್ಲಿಯೇ ಈ ಘಟನೆ ನಡೆದದ್ದು, ಆತಂಕಕ್ಕೂ ಕಾರಣವಾಗಿತ್ತು. ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವ ಒತ್ತಡ ಹೆಚ್ಚಾಗುತ್ತೆ. ಆಗ ವಾಜಪೇಯಿ ಹೇಳಿದ್ದು ಒಂದೇ ಮಾತು.
Advertisement
“ಗೋಧ್ರಾ ಹತ್ಯಾಕಾಂಡವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ರಾಜನಾದವನು ಪ್ರಜೆಗಳನ್ನು ಸಮಾನವಾಗಿ ಕಾಣಬೇಕೇ ಹೊರತು ಜಾತಿ-ಧರ್ಮಗಳ ಆಧಾರದ ಮೇಲೆ ವರ್ಗೀಕರಣ ಮಾಡುವುದು ಸರಿಯಲ್ಲ. ಮೋದಿ ಅವರೇ, ಮೊದಲು ರಾಜಧರ್ಮ ಪಾಲನೆ ಮಾಡಿ. ಅದು ನಿಮ್ಮ ಕರ್ತವ್ಯ ಕೂಡ.” ಹೀಗೆ ಹೇಳಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಿದ್ದ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ರಕ್ಷಿಸಿದ್ದರು. ಅಂದು ಅಟಲ್ ಬಿಹಾರಿ ವಾಜಪೇಯಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.
Advertisement
ಮೋದಿಯಂತಹ ನಾಯಕ ಮಾತ್ರವಲ್ಲ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೀಗೆ ರಾಷ್ಟ್ರ ರಾಜಕೀಯದಿಂದ ಪ್ರಾದೇಶಿಕ ಮಟ್ಟದವರೆಗೂ ಹಲವು ನವ ನಾಯಕರ ಹುಟ್ಟಿಗೆ ಕಾರಣರಾದರು ವಾಜಪೇಯಿ. ಆ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಫೂರ್ತಿಯಾಗಿದ್ದ ವಾಜಪೇಯಿ ಇಂದಿಗೂ ಎಂದೆಂದಿಗೂ ಅಜರಾಮರ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv