ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಪ್ಯಾರಾ ಮಿಲಿಟರಿ ಪಡೆ ಬಂಧಿಸಿದೆ.
ಇಂದು ಇಸ್ಲಾಮಾಬಾದ್ ಹೈಕೋರ್ಟ್ (Islamabad High Court) ಆವರಣದಲ್ಲೇ ಇಮ್ರಾನ್ ಖಾನ್ ಅವರನ್ನು ಬಂಧನ ಮಾಡಲಾಗಿದೆ. ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ಸೆಕ್ಷನ್ 144 ಜಾರಿಗೊಳಿಸಲಾಗಿದೆ.
Advertisement
ಇಮ್ರಾನ್ ಖಾನ್ ಮೇಲೆ 143 ಎಫ್‌ಐಆರ್ ದಾಖಲಾಗಿದ್ದು ಈಗ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಒಡೆತನದ ಅಲ್-ಖಾದಿರ್ ಟ್ರಸ್ಟ್‌ಗೆ ಬಹ್ರಿಯಾ ಟೌನ್ 530 ದಶಲಕ್ಷ ಪಾಕಿಸ್ತಾನ ರೂ. ಮೌಲ್ಯದ ಭೂಮಿಯನ್ನು ಮಂಜೂರು ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
Advertisement
ಮಾರ್ಚ್ ತಿಂಗಳಿನಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಪೊಲೀಸರು ಲಾಹೋರ್ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪಿಟಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ
Advertisement
Advertisement
ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್ ಅನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪವನ್ನು ಇಮ್ರಾನ್ ಎದುರಿಸುತ್ತಿದ್ದಾರೆ.
ಇಮ್ರಾನ್ ಖಾನ್ ಅವರ ಅಧಿಕಾರದ ಅವಧಿಯಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ಪಾಕಿಸ್ತಾನ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ತನಿಖೆ ನಡೆಸಿತ್ತು.
ಕಾನೂನಿನ ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ-ಖಾನಾಗೆ ಸಲ್ಲಿಸಬೇಕಾಗುತ್ತದೆ. ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸಿದರೆ ಅದು ಕಾನೂನುಬಾಹಿರ ಕೃತ್ಯ ಎಂದು ಪರಿಗಣಿಸಲಾಗುತ್ತದೆ.
ವಿಪಕ್ಷಗಳ ಅವಿಶ್ವಾಸ ಮತದಿಂದಾಗಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಶೆಹಬಾಜ್ ಶರೀಫ್ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಖಾನ್ ರಾಜೀನಾಮೆ ಬೆನ್ನಲ್ಲೇ ಅವರ ವಿರುದ್ಧ ಹಲವು ಆರೋಪಗಳು ವ್ಯಕ್ತವಾಗುತ್ತಿದ್ದು, ತನಿಖೆ ನಡೆಯುತ್ತಿದೆ.