ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ

Public TV
2 Min Read
virat kohli sumalatha ambareesh

– ಸರ್ಕಾರದ ನಿರ್ಲಕ್ಷ್ಯದಿಂದ 11 ಅಮಾಯಕರು ಬಲಿಯಾಗಿದ್ದಾರೆ ಎಂದ ಮಾಜಿ ಸಂಸದೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿರುವುದಕ್ಕೆ ಆರ್‌ಸಿಬಿಯ (RCB) ವಿರಾಟ್‌ ಕೊಹ್ಲಿ (Virat Kohli) ವಿರುದ್ಧ ಮಾತನಾಡುವವರನ್ನು ಮಾಜಿ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಲ್ತುಳಿತ ಪ್ರಕರಣ (Bengaluru Stampede) ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಲತಾ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಶಕ್ತಿ ಸರವಣನ್ ಅವರ ಫೇಸ್‌ಬುಕ್‌ನಲ್ಲಿನ ಪೋಸ್ಟ್‌ ಅನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

ಒಂದು ದುರಂತ ಘಟನೆಯನ್ನು ಬಳಸಿಕೊಂಡು ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಲು ಪ್ರಯತ್ನಿಸುತ್ತಿರುವ ಎಲ್ಲಾ ಮೂರ್ಖರಿಗೆ ಎಂದು ಸಂಸದೆ ಕಟುವಾದ ಸಂದೇಶ ರವಾನಿಸಿದ್ದಾರೆ.

ಕೊಹ್ಲಿಯನ್ನು ಟೀಕಿಸುವ ಮೊದಲು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಸಾರ್ವಜನಿಕ ಸುರಕ್ಷತೆಯ ಏಕೈಕ ಜವಾಬ್ದಾರಿ ರಾಜ್ಯ ಸರ್ಕಾರ ಮತ್ತು ಆಡಳಿತದ ಮೇಲಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ. ಈ ದುರಂತಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಬದಲಾಗಿ ಅವರ ಅಪರಾಧವನ್ನು ಮರೆಮಾಚುವ ಪ್ರಯತ್ನದಲ್ಲಿ ಬೇರೆಯವರನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ 11 ಅಮಾಯಕರ ಜೀವಗಳು ಬಲಿಯಾಗಿವೆ. ಮೃತರಿಗೆ ನ್ಯಾಯ ಸಿಗಬೇಕಾದರೆ, ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಬೇಕು. ಇದಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು.
ಒಂದು ತಂಡ ಅಥವಾ ಆಟಗಾರರ ಮೇಲೆ ಆರೋಪ ಹೊರಿಸುವುದು ನಿಮ್ಮ ಅಜ್ಞಾನ ಅಥವಾ ಸಣ್ಣತನವನ್ನು ತೋರಿಸುತ್ತದೆ ಎಂದು ಸಂಸದೆ ತಿಳಿಸಿದ್ದಾರೆ. ಇದನ್ನೂ ಓದಿ: ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

virat kohli bengaluru stampede

ಶಕ್ತಿ ಸರವಣನ್‌ ಪೋಸ್ಟ್‌ನಲ್ಲಿ ಏನಿತ್ತು?
ವಿರಾಟ್ ಕೊಹ್ಲಿ ವಿರುದ್ಧ ಅಭಿಯಾನ ನಡೆಯುತ್ತಿರುವುದು ಸರಿಯಲ್ಲ. ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಘಟನೆಗೆ ವಿರಾಟ್ ಕೊಹ್ಲಿಯನ್ನು ಹೊಣೆಗಾರನನ್ನಾಗಿಸಿ, ದ್ವೇಷ ಹರಡುತ್ತಿರುವುದನ್ನು ನೋಡಿ ನನಗೆ ಬೇಸರವಾಗಿದೆ. ಕೊಹ್ಲಿ ಜನಸಮೂಹವನ್ನು ಸಂಘಟಿಸಲಿಲ್ಲ, ಅವರು ಲಾಜಿಸ್ಟಿಕ್ಸ್ ಅನ್ನು ನಿಯಂತ್ರಿಸಲಿಲ್ಲ, ಖಂಡಿತವಾಗಿಯೂ ಯಾವುದೇ ಹಾನಿ ಸಂಭವಿಸುವ ಉದ್ದೇಶವನ್ನು ಹೊಂದಿರಲಿಲ್ಲ. ವರ್ಷಗಳಿಂದಲೂ ಆರ್‌ಸಿಬಿ ಪರ ಇರುವ ಅಭಿಮಾನಿಗಳ ಸಂಭ್ರಮ ನೋಡಲು ಕೊಹ್ಲಿ ಅಲ್ಲಿದ್ದರು. ದುರಂತಕ್ಕೆ ಕೊಹ್ಲಿಯನ್ನು ದೂಷಿಸುವುದು ತಪ್ಪು ಭಾವನೆ. ಅದು ವ್ಯವಸ್ಥೆಯ ವೈಫಲ್ಯ. ಜನಸಂದಣಿ ನಿರ್ವಹಣೆ ವೈಫಲ್ಯ, ಅಸಮರ್ಪಕ ಸುರಕ್ಷತಾ ಯೋಜನೆ ಮತ್ತು ಅಧಿಕಾರಿಗಳಿಂದ ನಿರೀಕ್ಷೆಯ ಕೊರತೆ ಇತ್ತು. ಈ ಹೊತ್ತಲ್ಲಿ, ರಾಷ್ಟ್ರಕ್ಕೆ ಹೆಮ್ಮೆ ಮತ್ತು ಸ್ಫೂರ್ತಿ ನೀಡಿದ ವ್ಯಕ್ತಿಯ ಕಡೆಗೆ ಬೆರಳು ತೋರಿಸುವುದು ಅನ್ಯಾಯ. ತನ್ನ ಅಭಿಮಾನಿಗಳಿಗೆ ಮಾತ್ರ ಪ್ರತಿಫಲ ನೀಡಲು ಬಯಸುವ ಆಟಗಾರನನ್ನು ಟಾರ್ಗೆಟ್‌ ಮಾಡಬಾರದು. ಇದು ಆತ್ಮಾವಲೋಕನಕ್ಕೆ ಸಮಯ, ಆರೋಪಕ್ಕಲ್ಲ. ನಾವು ಉತ್ತಮರಾಗೋಣ. ಮನುಷ್ಯರಾಗೋಣ ಎಂದು ಸಿನಿಮಾಟೋಗ್ರಾಫರ್‌ ಶಕ್ತಿ ಸರವಣನ್‌ ಪೋಸ್ಟ್‌ ಹಂಚಿಕೊಂಡಿದ್ದರು.

Share This Article