ದಾವಣಗೆರೆ: ಆಸ್ತಿ ವಿಚಾರಕ್ಕೆ ಕುಟುಂಭಸ್ತರು ಹಾಗೂ ಸಹೋದರರು ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಮಾಜಿ ಶಾಸಕರ ಮಗ ಹಾಗೂ ಸೊಸೆ ಮನೆ ಮುಂಭಾಗ ಪ್ರತಿಭಟನೆಗೆ ಕುಳಿತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣನವರ ಕೊನೆಯ ಮಗ ರುದ್ರಪ್ರಸಾದ್ ಹಾಗೂ ಪತ್ನಿ ಮೇಘಾ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ಸಹೋದರನಿಂದ ಪ್ರಾಣ ಬೆದರಿಕೆ ಇದೆ. ಆಸ್ತಿ ಪಾಲಾದ್ರು ಸಹ ನಮ್ಮ ಪಾಲಿಗೆ ಬಂದ ಆಸ್ತಿಯನ್ನು ದೌರ್ಜನ್ಯ ಮಾಡಿ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ವಾಸವಿರುವ ಮನೆಗೆ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ನಮಗೆ ಕಿರುಕುಳ ಕೊಟ್ಟಿದಲ್ಲದೆ, ನಾವು ಓಡಾಡುವ ಗೇಟ್ ಗೆ ವೆಲ್ಡಿಂಗ್ ಮಾಡಿದ್ದಾರೆ. ಇದನ್ನು ಕೇಳಲು ಹೋದ್ರೆ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ. ನಮಗೆ ರಕ್ಷಣೆ ಕೋರಿದ್ರು ಪೊಲೀಸ್ ಇಲಾಖೆಯಿಂದಲೂ ಸಹ ಯಾವುದೇ ಸಹಾಯ ಸಿಗುತ್ತಿಲ್ಲ. ಹಾಗಾಗಿ ರಕ್ಷಣೆ ಕೋರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮೋತಿ ವೀರಣ್ಣನವರ ಕೊನೆಯ ಮಗ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋತಿ ವೀರಣ್ಣನವರ ದ್ವಿತೀಯ ಪುತ್ರ ಯಜಮಾನ್ ರಾಜೇಂದ್ರ, ನಾವು ಯಾವುದೇ ಕಿರುಕುಳ ಕೊಟ್ಟಿಲ್ಲ. ಆಸ್ತಿ ವಿಚಾರ ಕೋರ್ಟ್ ನಲ್ಲಿ ಇದೆ. ನನ್ನ ತಮ್ಮನಿಗೆ ಬಂದಂತಹ ಮನೆಯಲ್ಲಿ ಯಾರು ಸಹ ವಾಸ ಮಾಡುತ್ತಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಾವು ಹಲ್ಲೆ ನಡೆಸಿದ್ದೆ ಆದರೆ, ಇಲ್ಲ ಅವರಿಗೆ ಕಿರುಕುಳ ಕೊಡುತ್ತಿರುವುದಾಗಲಿ ಸಾಕ್ಷಿ ಸಮೇತ ತೋರಿಸಲಿ. ಆಸ್ತಿಗಾಗಿ ನಮ್ಮ ತಂದೆಯ ಮರ್ಯಾದೆ ಮೂರುಕಾಸಿಗೆ ಹರಾಜು ಹಾಕುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.