ಕಾರವಾರ: ಮಾಜಿ ಶಾಸಕ ತಮ್ಮ ಕಚೇರಿಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಟಾಯ್ಲೆಟ್ ಸಮೇತ ಖಾಲಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕಿ ರೂಪಾಲಿ ನಾಯ್ಕರಿಗೆ ಮಾತ್ರ ತಮ್ಮ ಕಚೇರಿಯನ್ನ ಪಡೆಯುವುದು ಇದೀಗ ಹರಸಾಹಸದ ಕೆಲಸವಾಗಿದೆ. ಈ ಹಿಂದೆ ಕಾರವಾರ ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕರಿಗೆ ಕಚೇರಿಯನ್ನ ತೆರೆಯಲಾಗಿತ್ತು. ಕಳೆದ ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸತೀಶ್ ಸೈಲ್‍ನ್ನ ಕಟ್ಟಡವನ್ನು ಬಳಸಿಕೊಂಡಿದ್ದು ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಚೇರಿಯನ್ನ ತೆರವು ಮಾಡಿದ್ದರು. ಇನ್ನು ತೆರವು ಮಾಡುವ ಸಂದರ್ಭದಲ್ಲಿ ಕೇವಲ ಪಿಠೋಪಕರಣವನ್ನು ಮಾತ್ರ ತೆಗೆದು ಕೊಂಡುಹೋಗದೇ ಶೌಚಾಲಯಕ್ಕೆ ಅಳವಡಿಸಿದ್ದ ಪೈಪ್, ಟಾಯ್ಲೆಟ್, ಕಚೇರಿಗೆ ಬಳಸುತ್ತಿದ್ದ ಬಲ್ಪಗಳು ಸೇರಿದಂತೆ ಹಲವು ವಸ್ತುಗಳನ್ನ ಮಾಜಿ ಶಾಸಕರ ಕಡೆಯವರು ಕಿತ್ತುಕೊಂಡು ತೆರಳಿದ್ದಾರೆ.
Advertisement
Advertisement
ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರ ಆಯಾ ಕ್ಷೇತ್ರದಲ್ಲಿ ಶಾಸಕರಿಗೆ ಕಚೇರಿಗೆ ಅವಕಾಶವನ್ನ ಮಾಡಿಕೊಡುತ್ತದೆ. ಜನಸಾಮಾನ್ಯರಿಗೆ ಶಾಸಕರು ಕಚೇರಿಯಲ್ಲಿ ಸಿಗಲು, ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಲು ಸೇರಿದಂತೆ ಹತ್ತಾರು ಉದ್ದೇಶಕ್ಕೆ ಸರ್ಕಾರವೇ ಕಚೇರಿಗೆ ಅವಕಾಶವನ್ನ ಮಾಡಿಕೊಡಲಾಗುತ್ತದೆ. ಇನ್ನು ಆಯಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಆವರಣದಲ್ಲಿ ಕಚೇರಿಯನ್ನ ತೆರೆಯಲು ಅವಕಾಶವಿದ್ದು, ಸ್ಥಳೀಯ ಸಂಸ್ಥೆಯವರೇ ಶಾಸಕರ ಕಚೇರಿಗೆ ಸ್ಥಳಾವಕಾಶವನ್ನ ಕೊಡಬೇಕಾಗಿದೆ. ರಾಜ್ಯದ ಬಹುತೇಕ ಶಾಸಕರು ತಮ್ಮ ತಮ್ಮ ಕಚೇರಿಯನ್ನ ಪ್ರಾರಂಭಿಸಿದ್ದಾರೆ.
Advertisement
ಈ ಹಿಂದೆ ಇದ್ದ ಶಾಸಕರು ಕಚೇರಿ ಖಾಲಿ ಮಾಡುವ ನೆಪದಲ್ಲಿ ಕಚೇರಿಯಲ್ಲಿನ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೋದರೆ, ಇತ್ತ ಕಚೇರಿಯಲ್ಲಿನ ಅವ್ಯವಸ್ಥೆ ಬಹಿರಂಗವಾಗುತ್ತಿದ್ದಂತೆ ತಾಲೂಕು ಪಂಚಾಯತ್ ಸದಸ್ಯರುಗಳು ಕಚೇರಿ ಕೊಡುವ ಬಗ್ಗೆಯೇ ವಿರೋಧಕ್ಕೆ ಇಳಿದಿದ್ದು, ಬಾಡಿಗೆ ನೀಡುವಂತೆ ಠರಾವು ಮಾಡಿದ್ದಾರೆ. ಈ ಬಗ್ಗೆ ಕೆಲವರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ತಮ್ಮ ಸಭೆಯಲ್ಲಿ ಶಾಸಕರಿಗೆ ಯಾಕೆ ಕಚೇರಿ ಕೊಡಬೇಕು. ತಮ್ಮ ಕಚೇರಿಯನ್ನ ತಾಲೂಕು ಪಂಚಾಯತ್ ಆವರಣದಲ್ಲಿ ಪಡೆದರೆ ಅದಕ್ಕೆ ಶಾಸಕರು ಬಾಡಿಗೆಯನ್ನ ಕಟ್ಟಲಿ ಎಂದು ಸದಸ್ಯರು ಠರಾವನ್ನ ಸಹ ಹೊರಡಿಸಿದ್ದಾರೆ. ಇವೆಲ್ಲಾ ಘಟನೆಯಿಂದ ಬೇಸತ್ತಿರುವ ಶಾಸಕಿ ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.
Advertisement
ಶಾಸಕರ ಕಛೇರಿ ಅವ್ಯವಸ್ಥೆಯಿಂದ ಕೂಡಿರುವುದರಿಂದ ಶಾಸಕಿ ರೂಪಾಲಿ ನಾಯ್ಕ ಬಿಜೆಪಿ ಕಚೇರಿಯಲ್ಲಿಯೇ ಸದ್ಯ ತಮ್ಮ ಕಚೇರಿಯನ್ನ ತೆರೆದಿದ್ದಾರೆ. ಈ ಎಲ್ಲ ಬೆಳವಣಿಗೆಯಾದ ನಂತರ ಕಚೇರಿಯನ್ನ ಸರಿಪಡಿಸುವ ಕಾರ್ಯ ಮಾಡಿದ್ದಾದರೂ ಇನ್ನೂ ಕಚೇರಿಯನ್ನ ಶಾಸಕರಿಗೆ ಬಿಟ್ಟುಕೊಟ್ಟಿಲ್ಲ. ಇವರನ್ನು ಭೇಟಿಯಾಗಬೇಕಾದ ಸಾರ್ವಜನಿಕರು ಬಿಜೆಪಿ ಕಚೇರಿಗೆ ಬಂದು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಾಲೂಕು ಪಂಚಾಯಿತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರ ಬಳಿ ಕೇಳಿದರೆ ಹಿಂದಿನ ಶಾಸಕರು ತಮ್ಮ ಸ್ವಂತ ಖರ್ಚಿನಿಂದ ತಂದ ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಪೈಪ್ ಗಳನ್ನ, ಟಾಯ್ಲೆಟ್, ವಿದ್ಯುತ್ ಬಲ್ಪಗಳನ್ನು ಕೀಳುವಾಗ ಅವರಿಗೆ ಕರೆಮಾಡಿ ತಿಳಿಸಿದ್ದು, ಆಗ ಕೆಲಸಕ್ಕೆ ಬಂದವರು ಈ ರೀತಿ ಮಾಡಿದ್ದಾರೆ. ಸದ್ಯ ಕಚೇರಿಯನ್ನ ಶಾಸಕರಿಗೆ ನೀಡಿ ಸರಿಪಡಿಸಿಕೊಳ್ಳಲು ತಿಳಿಸಿದ್ದು, ಶಾಸಕರಿಗೆ ಕಚೇರಿ ನೀಡುವಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಕುಮಾರ್ ಹೇಳಿದ್ದಾರೆ.