ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹತಾಶೆ, ಬಿಜೆಪಿ ರಾಜ್ಯಾಧ್ಯಕ್ಷ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಇಂದು (ಶನಿವಾರ) ಸಿದ್ದಗಂಗಾ ಮಠಕ್ಕೆ (Siddaganga Matt) ತೆರಳಿ ಶ್ರೀಗಳನ್ನು ಭೇಟಿಯಾದರು. ಶ್ರೀಗಳ ಮುಂದೆ ಸೋಮಣ್ಣ (V.Somanna) ಚುನಾವಣಾ ಸೋಲಿನ ನೋವು ತೋಡಿಕೊಂಡರು.
ಶ್ರೀ ಶಿವಕುಮಾರ ಶ್ರೀಗಳ ಗದ್ದಿಗೆಗೆ ಸೋಮಣ್ಣ ಭೇಟಿ ನೀಡಿ, ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸೋಮಣ್ಣ ಅವರಿಗೆ ಪತ್ನಿ ಶೈಲಜಾ, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಬೆಂಗಳೂರಿಗೆ ಮೋದಿ ಆಗಮನ
ಬಳಿಕ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ವಿ.ಸೋಮಣ್ಣ, ಶ್ರೀಗಳ ಮುಂದೆ ವಿಧಾನಸಭಾ ಚುನಾವಣೆಯ ಸೋಲಿನ ನೋವು ತೋಡಿಕೊಂಡರು. ಸ್ಥಳೀಯ ಮುಖಂಡರೊಬ್ಬರು ಗೋವಿಂದರಾಜು ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದು ಮಾತು ಆರಂಭಿಸಿದಾಗ ಶ್ರೀಗಳ ಎದುರು ಅಳಲು ತೋಡಿಕೊಂಡರು. ಹೌದು, ನಾನು ಮಾಡಿದ ಮಹಾ ಅಪರಾಧ ಅದು. ಅಮಿತ್ ಶಾ ಅವರು ಬಂದು ಎರಡೂವರೆ ಗಂಟೆ ಮನೆಯಲ್ಲಿ ಕುತ್ಕೊಂಡ್ ಬಿಟ್ರು. ಅವರೇ ನಿಂತುಕೊ ಅಂದ್ಮೇಲೆ ನಾನು ಏನ್ ಮಾಡಬೇಕು. ಏನ್ ಮಾಡಲಿ ಹೇಳಿ ಸ್ವಾಮೀಜಿ. ಆಗ ನಾನು ಇಲ್ಲಾ ಅಂತಾ ಹೇಳಿದೆ. ಪಿಎಂ ಮೋದಿ ದೆಹಲಿಗೆ ಕರೆಸಿದ್ರು. ನಾಲ್ಕು ದಿನ ಅಲ್ಲೇ ಇಟ್ಕೊಂಡ್ರು. ನೀನು ನಿಂತುಕೊ ಅಂತಾ ಹೇಳಿದಾಗ ಏನ್ ಮಾಡಬೇಕು ಎಂದು ಹತಾಷೆ ನುಡಿಗಳನ್ನಾಡಿದರು.
ಮಠಕ್ಕೆ ಭೇಟಿ ಕುರಿತು ಮಾತನಾಡಿದ ಸೋಮಣ್ಣ, ನಾನು ಮಠದ ಭಕ್ತ. 44 ದಶಕಗಳ ಸಂಬAಧ ನನ್ನದು. ಡಿಸೆಂಬರ್ 6 ರಂದು ಗುರುಭವನ ಲೋಕಾರ್ಪಣೆ ಮಾಡುತ್ತೇವೆ. ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ. 6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಇಬ್ಬರು ಸಚಿವರು ಇರುತ್ತಾರೆ. ರಾಜಣ್ಣ, ಪರಮೇಶ್ವರ್ ಇರುತ್ತಾರೆ. ಅದಕ್ಕೆ ರಾಜಕೀಯ ಮಾಡೋವಷ್ಟು ಕೀಳುಮಟ್ಟ ನಾನು ಮಾಡಲ್ಲ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ
ನಾನು ಡಿ.6 ನೇ ತಾರೀಖಿನ ನಂತರ 7, 8, 9, 10 ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಸೇರಿ ಹೈಕಮಾಂಡ್‌ಗೆ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು, ನಮ್ಮದೇ ಅನುಭವ, ಸೇವೆ ಇದೆ, ಆಲೋಚನೆ ಇದೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು. ಹಾಗಾಗಿ ನಮ್ಮ ನೋವನ್ನು ಹೈಕಮಾಂಡ್‌ಗೆ ಹೇಳುತ್ತೇವೆ ಎಂದು ಪರೋಕ್ಷವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರೋದಕ್ಕೆ ಅಸಮಾಧಾನ ಹೊರಹಾಕಿದರು.