ಚಿಕ್ಕಬಳ್ಳಾಪುರ: ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ನಷ್ಟದಲ್ಲಿದ್ದ ನಾಟಕ ಕಂಪನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತೆ ಚಾಮುಂಡೇಶ್ವರಿ ಪಾತ್ರಕ್ಕೆ ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಉಮಾಶ್ರೀ ಅವರು, ಕುಮಾರೇಶ್ವರ ನಾಟಕ ಮಂಡಳಿಯ ಕಲಾವಿದೆಯಾಗಿದ್ದರು. ಆದರೆ ಈಗ ಈ ನಾಟಕಮಂಡಳಿ ನಷ್ಟದಲ್ಲಿದೆ ಎನ್ನುವ ವಿಚಾರ ತಿಳಿದ ಉಮಾಶ್ರೀ ಚಾಮುಂಡಿ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ತಮ್ಮ ನಾಟಕ ಕಂಪನಿಯ ಕಷ್ಟದಲ್ಲಿ ಜೊತೆಯಾಗಿದ್ದಾರೆ.
Advertisement
Advertisement
ಮಹಿಷಾಸುರ ಮರ್ಧಿನಿ ಪೌರಾಣಿಕ ನಾಟಕದಲ್ಲಿ ಚಾಮುಂಡಿಯ ಪಾತ್ರದಲ್ಲಿ ನಟಿಸಿದ ಉಮಾಶ್ರೀ ಅವರ ರೌದ್ರನಟನೆಯನ್ನು ನೋಡಿ ಪೇಕ್ಷಕರು ಮನಸೊರೆಗೊಂಡರು. ಚಾಮುಂಡಿ ಅವತಾರದಲ್ಲಿ ಉಮಾಶ್ರೀಯನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿಪಟ್ಟರು.
Advertisement
ಚಿತ್ರದುರ್ಗ ಮೂಲದ ಕುಮಾರಸ್ವಾಮಿ ಮಾಲೀಕತ್ವದ ಕುಮಾರೇಶ್ವರ ನಾಟಕ ಕಂಪನಿ ದೊಡ್ಡಬಳ್ಳಾಪುರ ನಗರದ ಕೋರ್ಟ್ ಬಳಿ ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತದೆ. ಮೂರು ತಿಂಗಳಿಂದ ಪ್ರತಿದಿನ ಎರಡು ಪ್ರದರ್ಶನ ನಡೆಯುತ್ತಿದ್ದರೂ ನಾಟಕ ನೋಡಲು ಜನ ಮಾತ್ರ ಬರುತ್ತಿರಲಿಲ್ಲ. ಪ್ರತಿ ಪ್ರದರ್ಶನದಲ್ಲಿ ಬೆರಳೆಣಿಕೆಯ ಜನ ಮಾತ್ರ ನಾಟಕ ನೋಡಲು ಬರುತ್ತಿದ್ದರು. ಪ್ರತಿ ಪ್ರದರ್ಶನಕ್ಕೆ 10 ಸಾವಿರ ರೂ. ಖರ್ಚಾಗುತ್ತಿತ್ತು. ಆದರೆ ಪ್ರತಿ ಪ್ರದರ್ಶನದಲ್ಲಿ 2 ಸಾವಿರ ರೂ. ಮಾತ್ರ ಕಲೆಕ್ಷನ್ ಆಗುತ್ತಿತ್ತು. ಇದರಿಂದ 4 ಲಕ್ಷ ರೂ. ನಷ್ಟ ಉಂಟಾಗಿತ್ತು. ಒಂದೆಡೆ ಕಲಾವಿದರಿಗೆ ಸಂಬಳ ನೀಡಲು ಹಣ ಇಲ್ಲದೇ ಇದ್ದರೆ ಮತ್ತೊಂದೆಡೆ ಬೇರೆ ಊರಿಗೆ ನಾಟಕ ಸಾಮಗ್ರಿ ಸಾಗಿಸಲು ಸಹ ಹಣವಿರಲಿಲ್ಲ. ಈ ವಿಚಾರ ತಿಳಿದ ಉಮಾಶ್ರೀ ಅವರು ನಾಟಕ ಕಂಪನಿಗೆ ನೆರವು ನೀಡಲು ಬಣ್ಣ ಹಚ್ಚಿದ್ದಾರೆ.
Advertisement
ಉಮಾಶ್ರೀ ಅವರು ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿ ನಾಟಕ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ನಾಟಕ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ನಷ್ಟದಲ್ಲಿ ನಡೆಯುತ್ತಿದ್ದ ನಾಟಕ ಕಂಪನಿಯ ಕಲೆಕ್ಷನ್ ಜೋರಾಗಿತ್ತು. ಇದರ ಜೊತೆಗೆ ದೊಡ್ಡಬಳ್ಳಾಪುರ ನಗರದ ಕನ್ನಡಪರ ಸಂಘಟನೆಗಳು ಮತ್ತು ಕಲಾಭಿಮಾನಿಗಳ ನೆರವಿನ ಮಹಾಪೂರವೇ ಹರಿದು ಬಂದು ಉಮಾಶ್ರೀ ಅವರ ಅಭಿನಯವನ್ನು ಕಣ್ತುಬಿಕೊಂಡಿದ್ದಾರೆ. ಜನರ ಸಹಾಯದಿಂದ ತಮ್ಮ ನಾಟಕ ಕಂಪನಿಯನ್ನು ಉಮಾಶ್ರೀ ಅವರು ಬಹಳ ಸಂತೋಷದಿಂದ ದಾವಣಗೆರೆಗೆ ಕರೆದುಕೊಂಡು ಹೋಗಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv