ಚಿಕ್ಕಬಳ್ಳಾಪುರ: ಕೋವಿಡ್ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ ಅನ್ನೋ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರಿಗೆ ಗಂಡಸುತನ ಇದ್ರೆ ಕೋರ್ಟಿಗೆ ಬರಲಿ ಅಂತ ಮಾಜಿ ಸಚಿವ ಟಿ.ಬಿ ಜಯಚಂದ್ರ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದ ಹೆಸರಲ್ಲಿ ರಾಜ್ಯ ಸರ್ಕಾರ ಇದುವರೆಗೂ 4200 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅದರಲ್ಲಿ ಸರಿ ಸುಮಾರು ಅರ್ಧದಷ್ಟು 2000 ಕೋಟಿ ರೂಪಾಯಿಗಳ ಖರ್ಚು ವೆಚ್ಚದ ಲೆಕ್ಕವೇ ಇಲ್ಲ. ಹೀಗಾಗಿ 2000 ಕೋಟಿ ರೂಪಾಯಿಗಳ ಅವ್ಯವಹಾರ ಆಗಿದೆ. ಈ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಗೆ ಲಾಯರ್ ನೋಟಿಸ್ ಕೊಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಲಾಯರ್ ನೋಟಿಸ್ ಕೊಟ್ಟು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಿಮಗೆ ಗಂಡಸುತನ ಇದ್ದರೆ ಕೋರ್ಟಿಗೆ ಬನ್ನಿ. ನಮ್ಮ ಬಳಿ ಇರೋ ದಾಖಲೆನೂ ಕೊಡ್ತೀವಿ. ನಿಮ್ಮ ಬಳಿ ಇರೋ ದಾಖಲೆನೂ ಕೊಡಿ. ಅಲ್ಲಿ ನಿಮ್ಮ ಅವ್ಯವಹಾರ ಪ್ರೂವ್ ಮಾಡ್ತೀವಿ ಅಂತ ಸವಾಲು ಹಾಕಿದರು.
ನೋಟಿಸ್ ಕೊಡಿಸಿ ಅವ್ಯವಹಾರ ಆಗಿದೆ ಅಂತ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಕೋವಿಡ್ ನಿಯಂತ್ರಣ ಮಾಡಲು ವೈಫಲ್ಯ ಅನುಭವಿಸಿದ್ದು, ಸರ್ಕಾರ ಇನ್ನೂ ಅಧಿಕಾರದಲ್ಲಿ ಮುಂದುವರಿಯೋದು ಸರಿಯಲ್ಲ. ವಿರೋಧ ಪಕ್ಷದವರಾಗಿ ನಾವು ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವೂ ಸಹ ಪಿಎಂ ಕೇರ್ಸ್‍ಫಂಡ್ ಗೆ ಬಂದ ಹಣದ ಲೆಕ್ಕ ಕೊಡ್ತಿಲ್ಲ. ಚೀನಾದಿಂದ ಹಲವರು ಪಿಎಂ ಕೇರ್ಸ್ ಗೆ ಹಣ ದೇಣಿಗೆ ನೀಡಿದ್ದಾರೆ. ಯಾಕೆ ಪಿಎಂ ಕೇರ್ಸ್ ಹಣದ ಲೆಕ್ಕ ಕೊಡ್ತಿಲ್ಲ ಅಂತ ಪ್ರಶ್ನೆ ಮಾಡಿದರು.