– ದೇಶ ಪ್ರೇಮಿಗಳನ್ನು ಅವಮಾನಿಸುವವನು ದೇಶದ್ರೋಹಿ
– ಸಿದ್ದರಾಮಯ್ಯ ಮನಿ ಟೆರರಿಸ್ಟ್, ಜಾತಿ ಟೆರರಿಸ್ಟ್
ತುಮಕೂರು: ಅಕ್ರಮ ಹಣ ಸಂಗ್ರಹಿಸಿ ಎಲ್ಲರೂ ಉಗ್ರಗಾಮಿಗಳಾಗಿ ಜೈಲು ಹೋಗುತ್ತಿದ್ದಾರೆ. ಇವನು ಒಂದು ದಿನ ಜೈಲಿಗೆ ಹೋಗುತ್ತಾನೆ ನೋಡಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ಸಿದ್ದರಾಮಯ್ಯ ಮನಿ ಟೆರರಿಸ್ಟ್, ಜಾತಿ ಟೆರರಿಸ್ಟ್. ಸಿದ್ದರಾಮಯ್ಯ ಅಪ್ಪಿತಪ್ಪಿ ಯಾವುದೇ ಕೇಸ್‍ನಲ್ಲಿ ಸಿಕ್ಕಿಹಾಕಿಕೊಳ್ಳಲಿಲ್ಲ. ಮುಂದೊಂದು ದಿನ ಯಾವುದಾದರು ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ಬಗ್ಗೆ ಅವರ ಹೇಳಿಕೆ ಮುನ್ಸೂಚನೆ ನೀಡುತ್ತಿದೆ. ಸಿದ್ದರಾಮಯ್ಯನವರ ಹೇಳಿಕೆಯಿಂದ ಬಿಜೆಪಿಗೆ ಲಾಭವೇ ಹೊರತು ನಷ್ಟವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಗಿಸಲು ಹೊರಟಿದ್ದಾರೆ. ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರು ಯಾಕೆ ಮಾತನಾಡಲ್ಲ? ಸಿದ್ದರಾಮಯ್ಯನವರ ದುರಂಕಾರ ಮಿತಿಮೀರಿದೆ. ಹೀಗಾಗಿ ಅವರ ಆಪ್ತರೇ ಪಕ್ಷ ಬಿಟ್ಟು ಹೊರ ಬಂದರು. ಕಡಿಮೆ ಆಗುತ್ತಿರುವ ತಮ್ಮ ಖ್ಯಾತಿಯನ್ನು ಮತ್ತೆ ಪಡೆಯಲು ಈ ರೀತಿ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯತ್ತದೆ. ಸಿದ್ದರಾಮಯ್ಯನವರ ಪರಿಸ್ಥಿತಿಯೂ ಹಾಗೇ ಆಗಿದೆ ಎಂದು ಗುಡುಗಿದರು.
ದೇಶ ಪ್ರೇಮಿಗಳನ್ನು ಅವಮಾನಿಸುವ ಸಿದ್ದರಾಮಯ್ಯ ಒಬ್ಬ ದೇಶದ್ರೋಹಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ ವಿ.ಡಿ ಸಾವರ್ಕರ್ ಅವರನ್ನು ಗೌರವಿಸಿದರು. ಅವನು ಅಂಡಮಾನ್‍ಗೆ ಹೋದರೆ ಸಾವರ್ಕರ್ ಎಲ್ಲಿದ್ದರು ಅಂತ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ಅವರ ಸರ್ವಿಸ್ ಏನು? ಅಪ್ಪಿತಪ್ಪಿ ಮನುಷ್ಯನಾಗಿ ಹುಟ್ಟಿ ಜಾತಿ ಜಾತಿ ವಿಭಜನೆ ಮಾಡುತ್ತಿದಾರೆ. ಅವರ ಅದೃಷ್ಟ ಸಿಎಂ ಆಗಿಬಿಟ್ಟರು. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಅನ್‍ಫಿಟ್ ಎಂದಿದ್ದರು. ಅವರನ್ನ ಇಟಲಿಗೆ ಕಳುಹಿಸಿ ಇಲ್ಲಿ ಲೀಡರ್ ಆಗುತ್ತಿದ್ದಾರೆ ಎಂದು ಕುಟುಕಿದರು.