ಚಿಕ್ಕಬಳ್ಳಾಪುರ: ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರ ನಡೆಸಿರುವ ಅನರ್ಹ ಶಾಸಕ ಸುಧಾಕರ್ ಇಂದಲ್ಲ ನಾಳೆ ತಿಹಾರ್ ಜೈಲು ಸೇರುತ್ತಾರೆ ಎಂದು ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಉಪಚುನಾವಣಾ ಪ್ರಚಾರ ನಡೆಸಿದ ಶಿವಶಂಕರರೆಡ್ಡಿ, ನಾನು ಕೃಷಿ ಮಂತ್ರಿಯಾಗಿದ್ದಾಗ ಕೃಷಿ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅವ್ಯವಾಹಾರ ನಡೆದಿದ್ದರೆ ತನಿಖೆ ನಡೆಸಿ ಸಾಬೀತು ಮಾಡಲಿ ಎಂದು ಸುಧಾಕರ್ ಆರೋಪಕ್ಕೆ ತಿರುಗೇಟು ನೀಡಿದರು. ಜಲ್ಲಿ ಕ್ರಷರ್ ಮಾಲೀಕರಿಂದ ಮಾಮೂಲಿ ವಸೂಲಿ ಮಾಡಿ ಅನರ್ಹ ಶಾಸಕ ಸುಧಾಕರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಹೊರತು ನಾನಲ್ಲ ಎಂದರು.
Advertisement
Advertisement
ಸುಧಾಕರ್ ನಡೆಸಿರುವ ಅಕ್ರಮಗಳ ಬಗ್ಗೆ ಬಹಿರಂಗವಾಗಿ ನಾನು ಚರ್ಚೆಗೆ ಸಿದ್ದ. ಸುಧಾಕರ್ ಸ್ವಗ್ರಾಮ ಪೇರೇಸಂದ್ರದಲ್ಲಿ ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ನಾನು ವೇದಿಕೆ ರೆಡಿ ಮಾಡಿಕೊಳ್ಳುತ್ತೇನೆ. ಅವರು ವೇದಿಕೆ ರೆಡಿ ಮಾಡಿಕೊಂಡು ಬಹಿರಂಗ ಚರ್ಚೆಗೆ ಬರಲಿ ಎಂದು ಸುಧಾಕರ್ ಗೆ ಸವಾಲು ಹಾಕಿದರು. ಅಲ್ಲದೆ ಮನೆ ಮಗನಂತೆ ನಂಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸುಧಾಕರ್ ಮೋಸ ಮಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಸಿದ್ದರಾಮಯ್ಯಗೆ ಪಂಗನಾಮ ಹಾಕಿದರು. ಈಗ ಬಂದು ಜನರ ಮಧ್ಯೆ ನಾಟಕ ಮಾಡುತ್ತಿದ್ದಾರೆ. ಸುಧಾಕರ್ ಗೆ ಎರಡು ನಾಲಿಗೆ ಇದ್ದು ಅಲ್ಲೊಂದು ಇಲ್ಲೊಂದು ಮಾತನಾಡ್ತಾರೆ ಎಂದರು.
Advertisement
Advertisement
17 ಮಂದಿ ಅನರ್ಹ ಶಾಸಕರು ಕೆಳಗೂ ಇಲ್ಲ ಮೇಲೂ ಇಲ್ಲ ಎನ್ನುವ ಹಾಗೆ ಅಂತರ್ ಪಿಶಾಚಿಗಳಾಗಿದ್ದಾರೆ. ಅನರ್ಹ ಶಾಸಕ ಸುಧಾಕರ್ ರಾಜಕಾರಣಿ ಅಲ್ಲ. ಉದ್ಯಮಿಯಾಗಿ ಜನರ ವೋಟ್ ತೆಗೆದುಕೊಂಡು ದುಡ್ಡು ಮಾಡುವುದಕ್ಕೆ ಬಂದಿದ್ದಾರೆ. ಅಕ್ರಮವಾಗಿ ದುಡ್ಡು ಹೊಡೆದು ಕುಕ್ಕರ್, ಮಿಕ್ಸಿ, ಸೀರೆ ಕೊಟ್ಟು ನಿಮಗೆ ಟೋಪಿ ಹಾಕುವುದಕ್ಕೆ ಬರುತ್ತಿದ್ದಾರೆ. ಟೋಪಿ ಹಾಕಿಸಿಕೊಳ್ಳಬೇಡಿ ಯಾಮಾರಬೇಡಿ. ಇಂತಹ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ ಸುಧಾಕರ್ ಗೆ ಬುದ್ದಿ ಕಲಿಸಿ ಎಂದು ವಾಗ್ದಾಳಿ ನಡೆಸಿದರು.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರ ಇರುವುದಿಲ್ಲ. ಮೂರೇ ತಿಂಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ದಯನೀಯ ಸ್ಥಿತಿ ಬಂದಿದ್ದು, ಮುಂದೆ ಜನಾಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಭವಿಷ್ಯ ನುಡಿದರು. ಅಲ್ಲದೆ ನೆರೆ ಪರಿಹಾರ ಕೊಡದ ಸರ್ಕಾರದ ನಡೆ ರಾಜ್ಯದ ಜನರಿಗೆ ಬೇಸರ ತಂದಿದೆ. ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಇದುವರೆಗೂ ಬಿಡಿಗಾಸು ಹಣ ಕೊಟ್ಟಿಲ್ಲ. ಜನರಿಗೆ ಹೇಗೆ ಮುಖ ತೋರಿಸೋದು ಎಂದು ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸ್ವತಃ ಬಿಜೆಪಿ ಮಂತ್ರಿಗಳೆ ಮಾತನಾಡಿಕೊಂಡಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರಿಗೆ ಒಂದು ರೂ. ಪರಿಹಾರ ಕೊಡುವುದಕ್ಕು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.